ಸರ್ಕಾರಿ ಶಾಲೆಯ ಛಾವಣಿ ಕುಸಿತ, ವಿದ್ಯಾರ್ಥಿಗಳಿಬ್ಬರಿಗೆ ಗಾಯ: ಕಳಪೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

kalape
Published on

ರಾಯಚೂರು: ತರಗತಿ ನಡೆಯುತ್ತಿರುವಾಗಲೇ ಸರ್ಕಾರಿ ಶಾಲೆಯೊಂದರ ಮೇಲ್ಛಾವಣಿ ಸಿಮೆಂಟ್​​ ಕುಸಿದಿದ್ದು, ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಸ್ಕಿ ಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದೆ. ಈ ಶಾಲೆಯನ್ನು 8 ವರ್ಷದ ಹಿಂದಷ್ಟೇ ನಿರ್ಮಿಸಲಾಗಿತ್ತು.

2ನೇ ತರಗತಿಯ ವಿದ್ಯಾರ್ಥಿಗಳಾದ ರಾಘವೇಂದ್ರ ಕೊರೆಕಾರ್(7) ಮತ್ತು ಅಪ್ಪಾಜಿ ಹನುಮೇಶ್(7) ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದ ಕೂಡಲೇ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶುಕ್ರವಾರ ಎಂದಿನಂತೆ ಶಾಲೆಯಲ್ಲಿ ತರಗತಿ ನಡೆಯುತ್ತಿತ್ತು. ಈ ವೇಳೆ ಛಾವಣಿಯ ಸಿಮೆಂಟ್​​ ಕುಸಿದಿದ್ದು, ಕೊಠಡಿಯೊಳಗೆ ಮುಂದಿನ ಬೆಂಚ್​​ನಲ್ಲಿ ಕುಳಿತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.

ಶಾಲಾ ಛಾವಣಿ ಕುಸಿದ ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕಟ್ಟಡ ನಿರ್ಮಿಸಿ 8 ವರ್ಷವಾಗಿದೆ. ಅಷ್ಟರಲ್ಲಿ ಛಾವಣಿ ಕುಸಿದಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net