ಖಾಸಗಿಗೆ ಸರ್ಕಾರಿ ಶಾಲೆ ಸೆಡ್ಡು

11sri-1
ಮಸಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
Published on

ಶೃಂಗೇರಿ: ಪ್ರಸ್ತುತ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವರ ಸಂಖ್ಯೆ ಕ್ಷೀಣಿಸುತ್ತಿದೆ. ಆದರೆ ತಾಲೂಕಿನ ಮಸಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದುತ್ತಿದೆ.

ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿರುವ ಶಾಲೆಗೆ ಬರುವ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರು. ಶಾಲೆಯ ಒಳಹೊಕ್ಕರೆ ವಿದ್ಯಾರ್ಥಿಗಳೇ ನಿರ್ಮಿಸಿದ ಪುಟ್ಟ ಕೈತೋಟ, ಸುಸಜ್ಜಿತ ಕೊಠಡಿಗಳು, ಅಡುಗೆ ಮನೆ, ಸುಸಜ್ಜಿತ ಶೌಚಗೃಹ, ಸ್ಮಾರ್ಟ್ ಕ್ಲಾಸ್‌ಗಳನ್ನು ನೋಡಿದಾಗ ಸರ್ಕಾರಿ ಶಾಲೆ ಎಂದರೆ ಹೀಗಿರಬೇಕು ಎಂಬ ಮೆಚ್ಚುಗೆ ಮಾತು ಎಲ್ಲರಿಂದಲೂ ಕೇಳಿಬರುತ್ತದೆ.
1941ರಲ್ಲಿ ಆರಂಭಗೊಂಡ ಶಾಲೆಗೆ ಪ್ರಸ್ತುತ 82 ವರ್ಷ ತುಂಬುತ್ತಿದೆ. ಮುಖ್ಯ ಶಿಕ್ಷಕ ಎಂ.ಎನ್.ರಾಜೇಶ್, ಸಹಶಿಕ್ಷಕರು, ಆಡಳಿತ ಮಂಡಳಿ, ಗ್ರಾಮಸ್ಥರು ಶಾಲಾಭಿವೃದ್ಧಿಗಾಗಿ ಟೊಂಕಕಟ್ಟಿ ನಿಂತಿದ್ದಾರೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಯೋಗ, ಸಂಗೀತ, ಸಂಸ್ಕೃತ ಭಾಷೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರತಿನಿತ್ಯ ಸಮಯ ಮೀಸಲಿಟ್ಟಿದ್ದಾರೆ. ಕಂಪ್ಯೂಟರ್ ಶಿಕ್ಷಣದ ನಡುವೆ ವಿದ್ಯಾರ್ಥಿಗಳು ಶಾಲೆಯಲ್ಲಿರುವ ಗ್ರಂಥಗಳನ್ನು ಓದುತ್ತಾರೆ. ಕ್ರೀಡೆ, ಚಿತ್ರಕಲೆ, ರಸಪ್ರಶ್ನೆ ಹೀಗೆ ತಾಲೂಕಿನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲೂ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ.
ಶಿಕ್ಷಕರು, ಆಡಳಿತ ಮಂಡಳಿ, ಗ್ರಾಮಸ್ಥರು, ದಾನಿಗಳು, ಶಾಲಾ ಅಭಿವೃದ್ಧಿಗಾಗಿ ಪರಿಶ್ರಮಿಸುತ್ತಿರುವ ಶಿಕ್ಷಣ ಪ್ರೇಮಿಗಳ ಕ್ರಿಯಾಶೀಲ ಗುಂಪು ಇಲ್ಲಿದೆ. ಸಮಾಜದ ಕಟ್ಟಕಡೆಯ ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂಬುದು ಅವರ ಪ್ರಮುಖ ಗುರಿ. 42 ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲ ಸವಲತ್ತುಗಳನ್ನು ಹೊಂದಿರುವ ಶಾಲೆಗೆ ಇನ್ನಷ್ಟು ಮಕ್ಕಳು ಬರಬೇಕಾದಲ್ಲಿ ವಾಹನ ವ್ಯವಸ್ಥೆ ಆಗಬೇಕಿದೆ. ದಾನಿಗಳಿಂದ ಸಮವಸ, ಶಾಲಾ ಬ್ಯಾಗ್, ನೋಟ್‌ಬುಕ್, ಸಾರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಶೂ, ಮಧ್ಯಾಹ್ನ ಊಟದಲ್ಲಿ ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದಿನೇದಿನೆ ಅಭಿವೃದ್ಧಿ ಹೊಂದುತ್ತಿರುವ ಈ ಶಾಲೆ ಮತ್ತಷ್ಟು ಅಭಿವೃದ್ಧಿಯಾಗಲು ದಾನಿಗಳ ಸಹಕಾರ ಅಗತ್ಯ.
ಆಕರ್ಷಣೀಯ ಭಿತ್ತಿಚಿತ್ರ: ಬೆಂಗಳೂರಿನ ಉಪ್ಕೃತಿ ಎನ್‌ಜಿಒ ಮುಖ್ಯಸ್ಥ ಚಂದನ್ ನೇತೃತ್ವದಲ್ಲಿ ಸುಮಾರು 30 ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಇತ್ತೀಚೆಗೆ ಎರಡು ದಿನಗಳ ಕಾಲ ಶಾಲಾ ಕೊಠಡಿಗಳಿಗೆ ಬಳಿದ ಬಣ್ಣ ಹಾಗೂ ಬಿಡಿಸಿದ ಆಕರ್ಷಕ ಭಿತ್ತಿ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿವೆ. ಪರಿಸರ, ಸಂಸ್ಕೃತಿ, ಶಿಕ್ಷಣ ಮುಂತಾದ ಪರಿಕಲ್ಪನೆಯಲ್ಲಿ ಚಿತ್ರಗಳು ಅನಾವರಣಗೊಂಡು ಶಾಲೆಯ ಸೌಂದರ್ಯ ಹೆಚ್ಚಿಸಿದೆ.
ಮಸಿಗೆ ಸರ್ಕಾರಿ ಶಾಲೆ ತಾಲೂಕಿನ ಮಾದರಿ ಶಾಲೆಗಳಲ್ಲಿ ಒಂದು. ದಾನಿಗಳ ಜತೆಗೆ ಶಿಕ್ಷಣ ಇಲಾಖೆ ಸಹಕಾರದಿಂದ ಶಾಲೆ ಅಭಿವೃದ್ಧಿ ಆಗುತ್ತಿದೆ. ಇದು ಇಲಾಖೆಗೆ ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಪ್ರಸ್ತುತ ಸನ್ನಿವೇಶದ ನಡುವೆ ಇಲ್ಲಿನ ಶಿಕ್ಷಕರ, ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ಕಾಳಜಿ ಅನನ್ಯ ಎನ್ನುತ್ತಾರೆ ಬಿಇಒ ಎನ್.ಜಿ.ರಾಘವೇಂದ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net