ಗುತ್ತಿಗೆದಾರರ ಸಮಾಧಾನಕ್ಕೆ ಸರ್ಕಾರ ಪಾವತಿ ಸೂತ್ರ: 80:20 ಅನುಪಾತದಲ್ಲಿ ಬಾಕಿ ಪಾವತಿಗೆ ನಿರ್ಧಾರ

Road Construction
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಬಾಕಿ ಪಾವತಿಗೆ ತಡೆ ಹಾಕಿದ್ದ ಹೊಸ ಸರ್ಕಾರದ ವಿರುದ್ಧ ಸೆಟೆದುನಿಂತ ಗುತ್ತಿಗೆದಾರರನ್ನು ಸಮಾಧಾನಪಡಿಸುವ ಕಾರ್ಯ ಆರಂಭವಾಗಿದೆ. ಗ್ಯಾರಂಟಿ ಯೋಜನೆಗಳು ಒಂದೊಂದಾಗಿ ಜಾರಿಯಾಗುತ್ತಿದ್ದಂತೆ ಸರ್ಕಾರ ದೊಡ್ಡ ಮಟ್ಟದಲ್ಲಿ ಹಣ ಹೊಂದಿಸುವ ಸವಾಲು ಎದುರಿಸಿತು. ಇದೀಗ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಮೊದಲ ಕಂತಿನ ಹಣ ಹಾಕಲು ಸರ್ಕಾರ ಆದಾಯವನ್ನು ಭದ್ರ ಮಾಡಿಕೊಂಡಿತ್ತು. ಇದೀಗ ಒಂದು ಹಂತ ದಾಟುತ್ತಿದ್ದಂತೆ ಗುತ್ತಿಗೆದಾರರತ್ತ ಗಮನ ಹರಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ಮಾಡಲು ಎರಡು ಕಾರಣಗಳಿಗೆ ಸರ್ಕಾರ ಹಿಂದೇಟು ಹಾಕಿತ್ತು. ಸರ್ಕಾರ ರಚನೆಯಾಗಿ ನೂರು ದಿನ ಕಳೆದರೂ ಹಳೇ ಬಿಲ್ ಪಾವತಿ ಮಾಡಲು ಹಠಮಾಡಿತ್ತು. ಗುತ್ತಿಗೆದಾರರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಬಳಿಕ ಸರ್ಕಾರ ಮಾತುಕತೆಗೆ ಆಹ್ವಾನಿಸಿತ್ತು. ಶೇ.40 ಪರ್ಸೆಂಟ್ ಕಮೀಷನ್ ಆರೋಪ ವಿಚಾರವಾಗಿ ಹಿಂದಿನ ಸರ್ಕಾರದ ಕೊನೆ ಘಟ್ಟದಲ್ಲಿ ಚಲಾವಣೆಯಲ್ಲಿದ್ದ ಗುತ್ತಿಗೆದಾರರು ಹೊಸ ಸರ್ಕಾರದ ಮೊದಲ ನೂರು ದಿನದಲ್ಲೂ ಸದ್ದು ಮಾಡಿದ್ದರು. ಬಾಕಿ ಹಣ ಬಿಡುಗಡೆಗೆ ಕಮೀಷನ್ ಕೇಳಲಾಗುತ್ತಿದೆ ಎಂದು ಆರೋಪ ಮಾಡಿ ಕೊನೆಗೆ ಒತ್ತಡಕ್ಕೆ ಸಿಲುಕಿ ಮಾತು ಹಿಂಪಡೆದುಕೊಂಡಿದ್ದರು.

ಗುತ್ತಿಗೆದಾರರ ಹಣ ಬಿಡುಗಡೆಗೆ ಎರಡು ಪರಿಹಾರ ಸೂತ್ರ ಕಂಡುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಎಒಸಿ ಬಿಡುಗಡೆಯಾದ ಪ್ರಕರಣಗಳಲ್ಲಿ ಶೇ.75 ಹಣ ಬಿಡುಗಡೆ ಮಾಡುವುದು, ಉಳಿದ ಶೇ.25 ನಂತರ ಬಿಡುಗಡೆ ಮಾಡುವುದು, ಲಭ್ಯ ಅನುದಾನದಲ್ಲಿ ಶೇ.80 ಜ್ಯೇಷ್ಠತೆ ಆಧಾರದಲ್ಲಿ, ಶೇ.20 ಸಚಿವರ ವಿವೇಚನಾ ಕೋಟಾದಡಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುತ್ತಿಗೆದಾರರ ವಿರುದ್ಧ ತನಿಖೆ ನಡೆಯುತ್ತಿದ್ದು, ಕಾಮಗಾರಿ ಕುರಿತು ಭಾಗಶಃ ಮಾಹಿತಿ ಕಲೆ ಹಾಕಲಾಗಿದೆ. ನೂರಾರು ಪ್ರಕರಣಗಳಲ್ಲಿ ಕಾಮಗಾರಿ ನಡೆಯದೇ ಹಣ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಅಂತಹ ದೂರುಗಳಿರುವ ಕಡೆ ಮತ್ತು ಆಡಳಿತ ಪಕ್ಷದ ಶಾಸಕರಿರುವ ಕಡೆ ಗುತ್ತಿಗೆದಾರರ ಬಾಕಿ ಪಾವತಿ ಮಾಡಲು ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಗುತ್ತಿಗೆದಾರರು ಹಾಗೂ ಶಾಸಕರ ನಡುವೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೊಂದಾಣಿಕೆಗಳಿರುತ್ತವೆ. ಒಂದು ವೇಳೆ ಗುತ್ತಿಗೆದಾರರು ತಿರುಗಿಬಿದ್ದರೆ ಸಮಸ್ಯೆಯಾಗುತ್ತದೆ, ಅಲ್ಲದೇ ಗುತ್ತಿಗೆದಾರರು ಸಂಘಟಿತರಾಗಿ ಹೋರಾಟಕ್ಕಿಳಿದರೆ ಗೊಂದಲ ಸೃಷ್ಟಿಯಾಗಲಿದೆ ಎಂಬ ಅಭಿಪ್ರಾಯ ಸರ್ಕಾರದಲ್ಲಿ ಚರ್ಚೆಯೂ ಆಗಿತ್ತು.

ಗುರುವಾರದಿಂದ ಹಣ ಬಿಡುಗಡೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ, ಸರ್ಕಾರದ ನಿರ್ಧಾರಕ್ಕೆ ಸ್ವಾಗತ. ಎಷ್ಟು ಹಣ ಪಾವತಿ ಮಾಡಿದ್ದಾರೆಂಬುದು ಶೀಘ್ರವೇ ಬಹಿರಂಗವಾಗಲಿದೆ. ಶೇ.75ರಷ್ಟು ಹಣ ನೀಡುತ್ತಿದ್ದಾರೆಂದು ಗೊತ್ತಾಗಿದೆ. | ಕೆಂಪಣ್ಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ

ಬಿಜೆಪಿ ಕಂಟ್ರಾಕ್ಟರ್​ಗಳ ಹುಡುಕಾಟ: ಪ್ರತಿಪಕ್ಷದ ಪರವಾಗಿರುವ ಅಥವಾ ಆ ಪಕ್ಷದ ಜತೆ ಗುರುತಿಸಿಕೊಂಡಿರುವ ಗುತ್ತಿಗೆದಾರರನ್ನು ಗುರುತಿಸಲು ಸರ್ಕಾರದಿಂದ ಅನೌಪಚಾರಿಕ ಸೂಚನೆ ಹೋಗಿದೆ ಎಂದು ಮೂಲಗಳು ತಿಳಿಸಿವೆ. ಸಚಿವರೊಬ್ಬರೇ ಈ ಸಂಬಂಧ ಸೂಚನೆ ನೀಡಿದ್ದಾರೆಂದು ಗೊತ್ತಾಗಿದ್ದು, ಮುಖ್ಯವಾಗಿ ಬಿಜೆಪಿ ಪರವಾದ ಗುತ್ತಿಗೆದಾರರ ಪಟ್ಟಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಬಾಕಿ ಬಿಲ್ ತಡೆ ಏಕೆ?

1. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು

2. ಹಿಂದಿನ ಸರ್ಕಾರದ ಅವಧಿಯಲ್ಲಿ ಬಂದ ಆರೋಪದ ತನಿಖೆ

3. ಹಿಂದಿನ ಸರ್ಕಾರದ ಕೊನೆ ಅವಧಿಯಲ್ಲಿ ವ್ಯಾಪಕವಾಗಿ ಕೆಲಸ ಕೈಗೆತ್ತಿಕೊಂಡಿದ್ದು.

4. ವರ್ಷದಿಂದ ವರ್ಷಕ್ಕೆ ಬಾಕಿ ಬಿಲ್ ಪ್ರಮಾಣ ಹೆಚ್ಚಾಗುತ್ತಿರುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net