ನೀರಾವರಿ ಯೋಜನೆಗಳಿಗೆ ಪ್ರಥಮ ಆದ್ಯತೆ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ: ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ಜಲ ಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ಪಿರಿಯಾಪಟ್ಟಣ ತಾಲೂಕಿನ ಮುತ್ತಿನ ಮುಳುಸೋಗೆ ಗ್ರಾಮದ ಸಮೀಪ 70 ಗ್ರಾಮಗಳಲ್ಲಿನ 150 ಕೆರೆಗಳು ಮತ್ತು ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ರಾಜ್ಯದಲ್ಲಿರುವ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೋರ್‌ವೆಲ್‌ಗಳಿಂದ ನೀರು ಪಡೆಯಲು ಸುಮಾರು 1200 ಅಡಿಗಳಷ್ಟು ಕೊರೆಸಬೇಕಿತ್ತು. ಇದೀಗ ಕೆರೆಗಳನ್ನು ತುಂಬಿಸುತ್ತಿರುವುದರಿಂದ 300-400 ಅಡಿಗಳಿಗೆ ನೀರು ದೊರಕುತ್ತಿದೆ ಎಂದು ಹೇಳಿದರು.


2013-18ನೇ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಖರ್ಚು ಮಾಡುವುದಾಗಿ ವಾಗ್ದಾನ ನೀಡಿದ್ದೆವು. ಅದರಂತೆ 5 ವರ್ಷಗಳಲ್ಲಿ 56 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೆವು. ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಗೆ 2017ರಲ್ಲಿ ನಾನೇ ಭೂಮಿಪೂಜೆ ಸಲ್ಲಿಸಿ ಇದೀಗ ಚಾಲನೆ ನೀಡುತ್ತಿರುವುದು ನನ್ನ ಭಾಗ್ಯ ಎಂದರು.

ಪ್ರಸ್ತುತ ರಾಜ್ಯದ 223 ತಾಲೂಕುಗಳಲ್ಲಿ ಬರವಿದ್ದು ನೀರು, ಜಾನುವಾರುಗಳ ಮೇವು, ಜನರು ಗುಳೇ ಹೋಗದಂತೆ ಕಾರ್ಯ ನಿರ್ವಹಿಸಿದ್ದೇವೆ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು ಇನ್ನೂ ಬಿಡುಗಡೆ ಆಗಿಲ್ಲ. ರಾಜ್ಯದ ಬಿಜೆಪಿ ಸಂಸದರು ಬರ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿಗೆ ಒತ್ತಡ ಹಾಕದಿರುವುದನ್ನು ಗಮನಿಸಿದರೆ ಅವರ ಸಾಮರ್ಥ್ಯವನ್ನು ಅನುಮಾನಿಸುವಂತಿದೆ. ನಾನೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾರನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೆ. ಡಿ.23 ರಂದು ಸಭೆ ಕರೆದು ತೀರ್ಮಾನಿಸುವುದಾಗಿ ತಿಳಿಸಿದ್ದರು. ಆದರೆ, ಈವರೆಗೂ ಕೇಂದ್ರದಿಂದ ಬಿಡಿಗಾಸು ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಢೋಂಗಿಗಳನ್ನು ಸೋಲಿಸಿ
ಜೈ ಶ್ರೀರಾಮ್ ಎಂಬುದು ಬಿಜೆಪಿಯವರ ಆಸ್ತಿಯಲ್ಲ. ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯವರು ಸಂಚು ರೂಪಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಜೆಡಿಎಸ್‌ನವರು ತಮ್ಮ ಅಸ್ತಿತ್ವಕ್ಕಾಗಿ ಮತ್ತು ಮತಕ್ಕಾಗಿ ತಮ್ಮ ಜಾತ್ಯತೀತ ನಿಲುವನ್ನು ಬದಿಗಿಟ್ಟು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಪ್ರಧಾನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಎಚ್.ಡಿ.ದೇವೇಗೌಡರಾದರೂ ರಾಜ್ಯಕ್ಕೆ ಸಿಗಬೇಕಿರುವ ಬರ ಪರಿಹಾರವನ್ನು ಕೊಡಿಸಲಿ ಎಂದು ಆಗ್ರಹಿಸಿದರು.
ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲ ಧರ್ಮದ, ಜಾತಿಯ ಜನರು ಒಂದು ಕುಟುಂಬದಂತೆ ಇರಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಢೋಂಗಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ರಸಗೊಬ್ಬರ ದರವನ್ನು ಮಿತಿ ಇಲ್ಲದಂತೆ ಏರಿಸಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರವಿಡಿ ಎಂದರು.

ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ನಾವು ಜಾರಿಗೆ ತಂದಿದ್ದೇವೆ. ಈ 5 ಗ್ಯಾರಂಟಿಗಳಿಗೆ 38 ಸಾವಿರ ಕೋಟಿ ರೂ. ಹಾಗೂ ಮುಂದಿನ ವರ್ಷದಲ್ಲಿ 58 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರ ರೈತ ಪರ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇಡೀ ದೇಶಕ್ಕೆ ಮಾದರಿಯಾದ ಸರ್ಕಾರವನ್ನು ರೂಪಿಸಿದ್ದೇವೆ. ಕೆರೆಗಳಿಗೆ ನೀರನ್ನು ತುಂಬಿಸಿ ಅಂತರ್ಜಲ ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಮ್ಮ ಸರ್ಕಾರ ರೈತ ಪರವಾಗಿದ್ದು ಚುನಾವಣೆಗೂ ಮುಂಚೆ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆಯುತ್ತಿದ್ದೇವೆ ಎಂದರು.

ನಮ್ಮ ಸರ್ಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕನ್ನಡದಲ್ಲಿ ನಾಮಫಲಕಗಳನ್ನು ಹಾಕುವಂತೆ ಆದೇಶ ಮಾಡಲಾಗಿದೆ. ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಪಾದಯಾತ್ರೆ ಮಾಡಿದೆವು. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ತಾಲೂಕಿನ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ಯೋಜನೆಯನ್ನು 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದರು. ಇಂದು ಅವರೇ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ. ಕೆರೆ ಕಟ್ಟೆಗಳಲ್ಲಿ ತುಂಬಿರುವ ಹೂಳನ್ನು ತೆಗೆಸಲು ಮತ್ತು ಬಂಡು ನಿರ್ಮಾಣ ಮಾಡಬೇಕು. ಇದಕ್ಕೆ ಸುಮಾರು 25 - 30 ಕೋಟಿ ರೂ. ವೆಚ್ಚವಾಗಲಿದ್ದು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.
ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎನ್.ಎಸ್.ಬೋಸರಾಜು, ಶಾಸಕರಾದ ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ.ತಿಮ್ಮಯ್ಯ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಎಚ್.ಡಿ.ಗಣೇಶ್, ಚಂದ್ರಮೌಳಿ, ಚಂದ್ರಕಲಾ, ಶೀಲಾ, ಶಶಿಕಲಾ, ಲೋಕೇಶ್, ಬಿ.ಜೆ.ಬಸವರಾಜ್, ನಿತಿನ್ ವೆಂಕಟೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net