

ಬೆಂಗಳೂರು: ಕೋವಿಡ್ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆ ಕಡ್ಡಾಯಗೊಳಿಸಿದೆ.
ಮಾತ್ರವಲ್ಲದೆ, ಕೋವಿಡ್ ಸೋಂಕು ಪತ್ತೆ ಸಲುವಾಗಿ ಮಾಡಿಸಿಕೊಳ್ಳಬೇಕಿರುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದರವನ್ನೂ ನಿಗದಿಪಡಿಸಿದೆ. ನಿಗದಿತ ದರವನ್ನಷ್ಟೇ ಪಡೆಯಬೇಕು, ಅದಕ್ಕಿಂತ ಹೆಚ್ಚಿಗೆ ಪಡೆಯುವಂತಿಲ್ಲ ಎಂಬುದನ್ನೂ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಆರ್‌ಟಿ-ಪಿಸಿಆರ್ ಪರೀಕ್ಷೆಗೆ 500 ರೂಪಾಯಿ, ಅಬ್ಬಾಟ್ ಐಡಿ 3 ಸಾವಿರ ರೂ., ಥರ್ಮೋ-ಫಿಷರ್ ಆಕ್ಯುಲಾ 1,500 ರೂ., ಟಾಟಾ ಎಂಡಿ3 ಜೀನ್ ಫಾಸ್ಟ್/ಟಾಟಾ ಎಂಡಿಎಕ್ಸ್‌ಎಫ್ 1,200 ರೂ., ಹಾಗೂ ಸೆಫೀಡ್ ಜೀನ್ ಎಕ್ಸ್‌ಪರ್ಟ್ ಟೆಸ್ಟ್ಗೆ 2,750 ರೂ. ದರ ನಿಗದಿಪಡಿಸಲಾಗಿದೆ.
ಕೋವಿಡ್ ಪರೀಕ್ಷೆಯನ್ನು ತ್ವರಿತವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ, ಈ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಐಸಿಎಂಆರ್ ಪರೀಕ್ಷಾ ಶಿಷ್ಟಾಚಾರಗಳ ಪಾಲನೆಯೊಂದಿಗೆ ನಿಗದಿಪಡಿಸಿದ ದರಗಳಲ್ಲೇ ಪರೀಕ್ಷೆ ನಡೆಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.