

ನವದೆಹಲಿ: ಧೂಮಪಾನ ಮಾಡಿ ಆರೋಗ್ಯ ಕಳೆದುಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಉದ್ಯೋಗಿ ಸಿಗರೇಟ್ ಸೇವನೆ ಮಾಡಿ 8 ಲಕ್ಷ ರೂ. ಕಳೆದುಕೊಂಡಿದ್ದಾನೆ. 61 ವರ್ಷದ ಸರ್ಕಾರಿ ಉದ್ಯೋಗಿ ಇಂಥದ್ದೊಂದು ನಷ್ಟಕ್ಕೆ ಒಳಗಾಗಿದ್ದಾನೆ.
ಜಪಾನ್ನಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಕುರಿತು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಇಲ್ಲಿನ ಸರ್ಕಾರಿ ಉದ್ಯೋಗಿಯೊಬ್ಬ ಕೆಲಸದ ಅವಧಿಯಲ್ಲಿ ಧೂಮಪಾನ ಮಾಡಿದ್ದಕ್ಕೆ ಈತನಿಗೆ 1.44 ಮಿಲಿಯನ್ ಯೆನ್ ಅಂದರೆ ಸುಮಾರು 8 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಇಲ್ಲಿನ ಹಣಕಾಸು ಇಲಾಖೆಯ ಮೂವರು ಪದೇಪದೆ ಧೂಮಪಾನ ಮಾಡಿ ಸಿಕ್ಕಿಹಾಕಿಕೊಂಡಿದ್ದು, ಅವರಿಗೆ ಕೆಲಸದ ಅವಧಿಯಲ್ಲಿ ಧೂಮಪಾನ ಮಾಡದಂತೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಅಲ್ಲದೆ ಸಿಕ್ಕಿಹಾಕಿಕೊಂಡರೆ 6 ತಿಂಗಳ ಸಂಬಳದಲ್ಲಿ ಶೇ. 10 ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅದಾಗ್ಯೂ ಅವರು ತಿದ್ದಿಕೊಳ್ಳದೆ ತಮ್ಮ ವ್ಯಸನ ಮುಂದುವರಿಸಿದ್ದರು. ಆ ಪೈಕಿ 61 ವರ್ಷದ ಒಬ್ಬ ಉದ್ಯೋಗಿಗೆ ಈ ದೊಡ್ಡ ಪ್ರಮಾಣದ ದಂಡ ವಿಧಿಸಲಾಗಿದೆ.
ಈತ ತನ್ನ ಕೆಲಸದ ಅವಧಿಯಲ್ಲಿ ಅಂದರೆ ಹದಿನಾಲ್ಕೂವರೆ ವರ್ಷಗಳಲ್ಲಿ ಒಟ್ಟು 4512 ಸಲ ಧೂಮಪಾನ ಮಾಡಿದ್ದಾನೆ. ಅರ್ಥಾತ್ ಕೆಲಸದ ಅವಧಿಯಲ್ಲಿ ಒಟ್ಟು 355 ಗಂಟೆ 19 ನಿಮಿಷಗಳನ್ನು ಧೂಮಪಾನದಲ್ಲೇ ಕಳೆದಿದ್ದಾನೆ. ಇದಕ್ಕಾಗಿ ಈತನಿಗೆ ವೇತನದಲ್ಲಿ ಶೆ. 10 ಕಡಿತ ಮಾಡುವ ಮೂಲಕ ಸುಮಾರು 8 ಲಕ್ಷ ರೂ. ದಂಡ ವಿಧಿಸಲಾಗಿದೆ. -ಏಜೆನ್ಸೀಸ್