ಸರ್ಕಾರಿ ವೈದ್ಯರ ಮುಷ್ಕರ ಆರಂಭ

Doctors
Published on

ಬೆಂಗಳೂರು: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ. 15ರಿಂದ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಿರುವ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಕೋವಿಡ್-19 ಸೇರಿ ಯಾವುದೇ ಸಾಂಕ್ರಾಮಿಕ-ಅಸಾಂಕ್ರಾಮಿಕ ಚಿಕಿತ್ಸೆ, ಅಂಕಿ-ಅಂಶ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ನೀಡದಿರಲು ನಿರ್ಧರಿಸಿದ್ದಾರೆ.

ಇದರಿಂದಾಗಿ ಇನ್ನು ಮುಂದೆ ಕರೊನಾ ಸೋಂಕಿತರು, ಡೆಂಗೆ, ಚಿಕೂನ್ ಗುನ್ಯಾ, ಎಚ್1ಎನ್1 ಸೇರಿ ಯಾವುದೇ ಸಾಂಕ್ರಾಮಿಕ ರೋಗಗಳ ಮಾಹಿತಿ ಸಿಗುವುದಿಲ್ಲ. ಜತೆಗೆ ಟಿಬಿ, ಕುಷ್ಠರೋಗ, ತಾಯಂದಿರು ಮತ್ತು ಮಕ್ಕಳ ಸಾವು, ಜಂತುಹುಳು ಮಾತ್ರೆ ವಿತರಣೆ, ಹೆರಿಗೆ ವಿವರ ಸೇರಿ ಆಸ್ಪತ್ರೆಗಳಲ್ಲಿ ನಡೆಯುವ ಚಿಕಿತ್ಸೆಯ ವಿವರಗಳು ಹಾಗೂ ಆರೋಗ್ಯ ಕಾರ್ಯಕರ್ತರು ನಡೆಸುವ ಆರೋಗ್ಯ ಕುರಿತು ಸಮೀಕ್ಷೆ ಮತ್ತು ಜಾಗೃತಿ ಕಾರ್ಯಕ್ರಮಗಳ ಯಾವೊಂದು ವರದಿ ಲಭ್ಯವಾಗದೆ ಆರೋಗ್ಯ ಇಲಾಖೆ ಕಾರ್ಯಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ‘ಮೊಘಲ್​ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮ್ಯೂಸಿಯಂ’ ಎಂದು ಬದಲಿಸಿದ ಯೋಗಿ ಆದಿತ್ಯನಾಥ್​

ಸಭೆ ಬಹಿಷ್ಕಾರ: ಆರೋಗ್ಯ ಇಲಾಖೆ ಸಚಿವರೂ ಸೇರಿ ಪ್ರಧಾನ ಕಾರ್ಯದರ್ಶಿ, ಆಯುಕ್ತ, ನಿರ್ದೇಶಕ, ಇಲಾಖೆಯ ವೈದ್ಯಾಧಿಕಾರಿ, ಜಿಲ್ಲಾಧಿಕಾರಿಗಳು ನಡೆಸುವ ಝುೂಮ್ ಕಾನ್ಪರೆನ್ಸ್, ವೆಬಿನಾರ್, ಆನ್​ಲೈನ್ ಮೀಟಿಂಗ್​ಗಳಲ್ಲಿ ಪಾಲ್ಗೊಳ್ಳದೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಎಲ್ಲ ಸರ್ಕಾರಿ ಸಭೆಗಳನ್ನು ಬಹಿಷ್ಕರಿಸಲಾಗುವುದು ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ ಜಿ.ಎ. ಶ್ರೀನಿವಾಸ್ ತಿಳಿಸಿದ್ದಾರೆ. ಸೆ. 21ರಂದು ತುರ್ತಚಿಕಿತ್ಸೆ ಹೊರತುಪಡಿಸಿ, ಹೊರರೋಗಿಗಳ ಸೇವೆ ಸಂಪೂರ್ಣ ಸ್ಥಗಿತಗೊಳಿಸಿ ‘ಬೆಂಗಳೂರು ಚಲೋ’ ಜಾಥಾ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net