ಲಸಿಕೆ ಸುರಕ್ಷಿತ, ಭಯ ಬೇಡ: ಕರೊನಾ ವಾರಿಯರ್ಸ್​ಗೆ ಸರ್ಕಾರ ಮನವಿ, ಹೊಸ ಪ್ರಕರಣ ಭಾರಿ ಇಳಿಕೆ..

Nation Lead
Published on

ನವದೆಹಲಿ: ಕರೊನಾ ಲಸಿಕೆಯ ಅಡ್ಡ ಪರಿಣಾಮದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇದೆ ಮತ್ತು ಇಂತಹ ಅಲರ್ಜಿಗಳು ಸಾಮಾನ್ಯ. ಹೀಗಾಗಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬಗ್ಗೆ ಭಯ ಬೇಡ, ಇವು ಸುರಕ್ಷಿತವಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆರೋಗ್ಯ ಕ್ಷೇತ್ರದಲ್ಲೇ ಇರುವ ವೈದ್ಯರು ಮತ್ತು ನರ್ಸ್​ಗಳು ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ವಿಷಾದನೀಯ. ಇದರಿಂದ ಸಾಮಾಜಿಕ ಹೊಣೆಗಾರಿಕೆಯನ್ನು ಪೂರೈಸಲು ಆಗುತ್ತಿಲ್ಲವೆಂಬ ತಪ್ಪು ಸಂದೇಶ ಸಮಾಜಕ್ಕೆ ಹೋಗುತ್ತದೆ. ಆದ್ದರಿಂದ ಯಾವುದೇ ಹಿಂಜರಿಕೆ ಇಲ್ಲದೆ ಲಸಿಕೆ ಪಡೆಯಿರಿ, ಅಭಿಯಾನ ಯಶಸ್ವಿಗೊಳಿಸಿ ಹಾಗೂ ಜನರನ್ನು ಅನುಮಾನದಿಂದ ದೂರ ಮಾಡಿ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪಾಲ್ ಮನವಿ ಮಾಡಿದ್ದಾರೆ.

ಮುಂಚೂಣಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ಪಾಲ್ ಈ ಹೇಳಿಕೆ ನೀಡಿದ್ದಾರೆ. ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಈಗ ಆರೋಗ್ಯ ವಲಯದವರೇ ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕುತ್ತಿರುವುದು ಅಭಿಯಾನಕ್ಕೆ ತುಸು ಹಿನ್ನಡೆ ಉಂಟು ಮಾಡಿದೆ.

45 ಲಕ್ಷ ಕೊವ್ಯಾಕ್ಸಿನ್ ಡೋಸೇಜ್​ಗೆ ಬೇಡಿಕೆ: ಕೇಂದ್ರ ಸರ್ಕಾರ 45 ಲಕ್ಷ ಕೊವ್ಯಾಕ್ಸಿನ್ ಡೋಸೇಜ್ ಪೂರೈಕೆ ಮಾಡುವಂತೆ ಹೈದರಾಬಾದ್ ಮೂಲಕದ ಭಾರತ್ ಬಯೋಟೆಕ್​ಗೆ ಪತ್ರ ಬರೆದಿದೆ. ಈ ಪೈಕಿ 8 ಲಕ್ಷ ಡೋಸೇಜ್​ಗಳನ್ನು ಮಾರಿಷಸ್, ಪಿಲಿಫೀನ್ಸ್, ಮ್ಯಾನ್ಮಾರ್​ಗಳಿಗೆ ಸೌರ್ಹಾದದ ದ್ಯೋತಕವಾಗಿ ಸರಬರಾಜು ಮಾಡಲಿದೆ ಎನ್ನಲಾಗಿದೆ. ಈಗಾಗಲೇ 55 ಲಕ್ಷ ಡೋಸೇಜ್​ಗಳನ್ನು ಪೂರೈಕೆ ಮಾಡಿದ್ದು, ಇವು ವಿಜಯವಾಡ, ಗುವಾಹಟಿ, ಪಟನಾ, ದೆಹಲಿ, ಕುರುಕ್ಷೇತ್ರ, ಬೆಂಗಳೂರು, ಪುಣೆ, ಭುವನೇಶ್ವರ, ಜೈಪುರ, ಚೆನ್ನೈ ಮತ್ತು ಲಖನೌಗಳಿಗೆ ತಲುಪಿವೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

6.31 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ: ಶನಿವಾರದಿಂದ ಆರಂಭವಾದ ಲಸಿಕೆ ಅಭಿಯಾನದಲ್ಲಿ ಮಂಗಳವಾರದವರೆಗೆ 6.31 ಲಕ್ಷಕ್ಕೂ ಹೆಚ್ಚು ಜನರಿಗೆ ಚುಚ್ಚುಮದ್ದು ನೀಡಲಾಗಿದ್ದು, ಸೋಮವಾರದವರೆಗೆ 580 ಜನರಲ್ಲಿ (ಶೇ. 0.18) ಅಡ್ಡ ಪರಿಣಾಮ ವರದಿಯಾಗಿದೆೆ. ಈ ಪೈಕಿ ಏಳು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಸಿಕೆ ಪಡೆದ ನಂತರ ಇಬ್ಬರು ಸಾವನ್ನಪ್ಪಿದ್ದರೂ ಇದಕ್ಕೆ ಲಸಿಕೆ ಕಾರಣವಲ್ಲ ಎಂಬುದು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಮೆರಿಕದಲ್ಲಿ ಲಸಿಕೆ ಅಭಿಯಾನದ ಒಂದು ವಾರದಲ್ಲಿ 5.56 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಬ್ರಿಟನ್​ನಲ್ಲಿ ಈ ಪ್ರಮಾಣ ಸುಮಾರು 1.37 ಲಕ್ಷ ಇದೆ. ಫ್ರಾನ್ಸ್​ನಲ್ಲಿ 516 ಮಂದಿಗೆ ಮಾತ್ರ ಲಸಿಕೆ ಸಿಕ್ಕಿದೆ. ರಷ್ಯಾದಲ್ಲಿ 52 ಸಾವಿರ ಜನರು ಒಂದು ವಾರದಲ್ಲಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಲಕ್ಷದ್ವೀಪ (ಶೇ. 89.3) ಸಿಕ್ಕಿಂ (ಶೇ. 85.7), ಒಡಿಶಾ (ಶೇ.82.6), ತೆಲಂಗಾಣ (ಶೇ.81.1) ಉತ್ತರ ಪ್ರದೇಶ (ಶೇ.71.4), ರಾಜಸ್ಥಾನ (ಶೇ.71.3)ಗಳು ಲಸಿಕೆ ಅಭಿಯಾನದಲ್ಲಿ ಮುಂಚೂಣಿಯಲ್ಲಿವೆ ಎಂದಿದ್ದಾರೆ. ಭೂತಾನ್, ಮಾಲ್ದೀವ್ಸ್, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಸೀಶೆಲ್ಸ್ ಗಳಿಗೆ ಬುಧವಾರದಿಂದ ಲಸಿಕೆ ರವಾನೆ. ಅಫ್ಘಾನಿಸ್ತಾನ, ಶ್ರೀಲಂಕಾ, ಮಾರಿಷಸ್, ಫಿಲಿಪ್ಪೀನ್ಸ್ ಗಳಿಗೂ ಮುಂದಿನ ದಿನಗಳಲ್ಲಿ ಲಸಿಕೆ ಪೂರೈಸಲಿದೆ.

ಚೀನಾಕ್ಕೆ ಡಬ್ಲ್ಯುಎಚ್​ಒ ತಂಡ ತಪರಾಕಿ

ಕರೊನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲೇ ಇದಕ್ಕೆ ಕಡಿವಾಣ ಹಾಕಲು ವಿಳಂಬ ಮಾಡಿದ ಚೀನಾ ಮತ್ತು ಇನ್ನಿತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ತಜ್ಞರ ತಂಡ ತಪರಾಕಿ ಹಾಕಿದೆ. ಸೋಂಕು ವ್ಯಾಪಕವಾದರೂ ಇದನ್ನು ಸಾಂಕ್ರಾಮಿಕವೆಂದು ಗುರುತಿಸಿ ಸಾರ್ವಜನಿಕ ಆರೋಗ್ಯದ ತುರ್ತಪರಿಸ್ಥಿತಿ ಎಂದು ಘೋಷಿಸಲು ತಡಮಾಡಿದ್ದೇಕೆ? ಎಂದು ಪ್ರಶ್ನಿಸಿದೆ. ಕರೊನಾ ಸೋಂಕಿನ ಬಗ್ಗೆ ಚೀನಾ ಆರಂಭಿಕ ಹಂತದಲ್ಲೇ ಜಾಗೃತವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರೆ ಜಗತ್ತು ಇಂದು ಈ ದಿನಗಳನ್ನು ನೋಡುವುದು ತಪು್ಪತ್ತಿತ್ತು. ಚೀನಾದ ನಂತರ ಸೋಂಕು ಕಾಣಿಸಿಕೊಂಡ ರಾಷ್ಟ್ರಗಳೂ ತ್ವರಿತವಾಗಿ ಕ್ರಮಕೈಗೊಳ್ಳಬೇಕಿತ್ತು ಎಂದು ತಂಡದ ನೇತೃತ್ವ ವಹಿಸಿದ್ದ ಲೈಬೀರಿಯಾದ ಮಾಜಿ ಅಧ್ಯಕ್ಷ ಎಲೆನ್ ಜಾನ್ಸನ್ ಸರ್ಲೀಫ್ ಮತ್ತು ನ್ಯೂಜಿಲೆಂಡ್​ನ ಮಾಜಿ ಪ್ರಧಾನಿ ಹೆಲೆನ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. ಕರೊನಾ ಕುರಿತಂತೆ ಮೊದಲೇ ಎಚ್ಚರಿಕೆ ನೀಡದ ಡಬ್ಲ್ಯುಎಚ್​ಒವನ್ನು ಹಲವು ರಾಷ್ಟ್ರಗಳ ಕಟುವಾಗಿ ಟೀಕಿಸಿದ್ದವು. ಡಬ್ಲ್ಯುಎಚ್​ಒ ಚೀನಾದ ಕೈಗೊಂಬೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ತೀವ್ರ ಟೀಕೆಗೆ ಗುರಿಯಾದ ಡಬ್ಲ್ಯುಎಚ್​ಒ, ತಜ್ಞರ ತಂಡನ್ನು ನೇಮಿಸಿತ್ತು.

ಸೋಂಕಿನ ಸಂಖ್ಯೆ 8 ತಿಂಗಳ ಹಿಂದಿನ ಮಟ್ಟಕ್ಕೆ

ಭಾರತದಲ್ಲಿ ಕೋವಿಡ್ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಕಳೆದ 24 ತಾಸಿನಲ್ಲಿ 10,064 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ಎಂಟು ತಿಂಗಳ ಹಿಂದೆ ಇದ್ದ ನಿತ್ಯದ ಸಂಖ್ಯೆಯಾಗಿದೆ. ಜೂನ್ 11ರಂದು 9,996 ವರದಿ ಆಗಿತ್ತು. ಮೇ 23 ನಂತರ ದಿನದ ಸಾವಿನ ಸಂಖ್ಯೆ ತಗ್ಗಿರುವುದು ಮಂಗಳವಾರ ದಾಖಲಾಗಿದೆ. 140 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 1.05 ಕೋಟಿಗೆ ಏರಿದ್ದರೆ, ಗುಣಮುಖರ ಪ್ರಮಾಣ 1.02 ಕೋಟಿ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.97 ಲಕ್ಷ ಇದೆ. ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಪೈಕಿ ಶೇ.72 ಇದೆ. ಮೃತರ ಸಂಖ್ಯೆ 1.52 ಲಕ್ಷ ಮೀರಿದೆ. 2020ರ ಜನವರಿ 30ರ ನಂತರದಿಂದ ಈವರೆಗೆ 18.78 ಕೋಟಿ ಸ್ಯಾಂಪಲ್​ಗಳನ್ನು ಪರೀಕ್ಷಿಸಲಾಗಿದೆ. ಒಟ್ಟಾರೆ ಪಾಸಿಟಿವಿಟಿ ಅಂಶ ಶೇ. 5.63 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net