

ಆರ್.ತುಳಸಿಕುಮಾರ್ ಬೆಂಗಳೂರು
ಪೇಟೆ-ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಉತ್ಸವ, ಜಾತ್ರೆ ಹಾಗೂ ಇನ್ನಿತರ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಮಂಗಳವಾದ್ಯವಾಗಿ ನುಡಿಸುವ ನಾದಸ್ವರ ನಾದ ಸವಿತಾ ಸಮಾಜದ ಸಂಕೇತವೂ ಹೌದು. ಮುಜರಾಯಿ ಸಹಿತ ಹಲವು ಖಾಸಗಿ ದೇಗುಲಗಳಲ್ಲೂ ಸವಿತಾ ಸಮಾಜದವರ ನಾದಸ್ವರ ಸೇವೆ ಇಲ್ಲದೆ ಉತ್ಸವ ಪೂರ್ಣ ವಾಗದು ಎಂಬ ನಂಬಿಕೆ ಇದೆ. ಆದರೆ, ಈ ಒಂದು ಚಟುವಟಿಕೆ ಹೊರತುಪಡಿಸಿ ಇನ್ನುಳಿದ ಎಲ್ಲ ಕಾರ್ಯದಲ್ಲೂ ಈ ಸಮಾಜವನ್ನು ದೂರ ಇಡಲಾಗಿದೆ.
ಕರ್ನಾಟಕದ ಜನಸಂಖ್ಯೆಯಲ್ಲಿ ಸವಿತಾ ಸಮಾಜದವರು ಶೇಕಡ 6ರಷ್ಟಿದ್ದಾರೆ. ಇವರಲ್ಲಿ ಶೇ.70 ಮಂದಿ ಗ್ರಾಮೀಣ ಭಾಗದಲ್ಲಿ ವಾಸವಿದ್ದಾರೆ. ಸಾಕ್ಷರತೆ ಪ್ರಮಾಣ ಕೂಡ ಕಡಿಮೆ. ಹಿಂದುಳಿದ ವರ್ಗದ ಪಟ್ಟಿಯಲ್ಲಿರುವ ಈ ಸಮುದಾಯದವರನ್ನು ಅಸ್ಪಶ್ಯರಂತೆ ಕಾಣಲಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕ್ಷೌರ ಮಾಡುವ ಕೆಲಸ ಮಾಡಿದರೂ, ಕೀಳು ಭಾವನೆಯಿಂದ ನೋಡುವ ಮನಸ್ಥಿತಿ ದೂರವಾಗಿಲ್ಲ. ಈ ಸಮಾಜದವರನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸಬೇಕು ಎಂಬ ಬೇಡಿಕೆ ಈಡೇರಿಲ್ಲ.
ಪ್ರವರ್ಗ 1ಎ ಮೀಸಲಿಗೆ ಆಗ್ರಹ: ರಾಜ್ಯದಲ್ಲಿ ಸವಿತಾ ಸಮಾಜವು ತೀರಾ ಹಿಂದುಳಿದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ, ಸಮುದಾಯದ ಹಿಂದುಳಿದಿರುವುದಕ್ಕೆ ತಕ್ಕಂತೆ ಸೌಲಭ್ಯ ಒದಗಿಸಲು ಸರಿಯಾದ ಮಾನದಂಡಗಳನ್ನು ಅನುಸರಿಸದ ಕಾರಣ ಸರ್ಕಾರಿ ಸವಲತ್ತು ಮರೀಚಿಕೆಯಾಗಿವೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಹಿಂದುಳಿಯುವಿಕೆಯನ್ನು ಪರಿಗಣಿಸಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಸಲಹೆ ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ನೀಡಿದ್ದವು ಹಾಗೂ ಡಾ. ಸಿ.ಎಸ್.ದ್ವಾರಕನಾಥ್ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರಿದು ಈವರೆಗೂ ಜಾರಿಗೆ ಬಂದಿಲ್ಲ. ಎಸ್ಸಿ/ಎಸ್ಟಿ ಸ್ಥಾನಮಾನ ಕಲ್ಪಿಸದಿದ್ದಲ್ಲಿ ‘ಪ್ರವರ್ಗ 1ಎ’ಗೆ ಸೇರಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ.
ರಾಜ್ಯದಲ್ಲಿ ಸವಿತಾ ಸಮಾಜ ಹಿಂದುಳಿದಿದ್ದು, ಗ್ರಾಮೀಣ ಭಾಗದಲ್ಲಿ ಸಮುದಾಯದವರನ್ನು ಅಸ್ಪಶ್ಯರಂತೆ ಕಾಣಲಾಗುತ್ತಿದೆ. ನಮ್ಮ ಜನರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಲು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಬೇಕು. ಸಮಾಜದವರ ವೃತ್ತಿಕಾಯಕಕ್ಕೆ ಅನುಗುಣವಾಗಿ ಸಾಲಸೌಲಭ್ಯ ಒದಗಿಸಬೇಕು.
| ಲಕ್ಷ್ಮೀ ಪ್ರಸನ್ನ ಸಂಸ್ಥಾಪಕ ಅಧ್ಯಕ್ಷ, ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘ