

ಶಿವಮೊಗ್ಗ: ಆಂಧ್ರಪ್ರದೇಶದ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಾಗರ ತಾಲೂಕು ಭೈರಾಪುರ ಗ್ರಾಮದ ಲೋಕಪ್ಪ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 13 ವರ್ಷದ ಮಗನನ್ನು ನೋಡಲು ಪಾಸ್ ಪಡೆದು ಅಲ್ಲಿಂದ ಬರುತ್ತಿದ್ದಾರೆ. ಆದರೆ, ಮಗ ಬದುಕಿಲ್ಲ! ಲೋಕಪ್ಪ ಅವರ ಮಗ ಚರಣನಿಗೆ ಚಿಕ್ಕಂದಿನಿಂದಲೇ ಕಿಡ್ನಿ ಸಮಸ್ಯೆ. ಅವನ ಆರೋಗ್ಯ ಈಚೆಗೆ ಬಿಗಡಾಯಿಸಿತ್ತು. ಬದುಕುವುದು ಕಷ್ಟ ಎನ್ನುವುದನ್ನು ತಿಳಿದ ಅವನಿಗೆ ತಂದೆ ನೋಡುವ ಆಸೆ.
ಮಗನ ಸ್ಥಿತಿ ಮತ್ತು ಅವನ ಆಸೆ ತಿಳಿದರೂ ಲಾಕ್ಡೌನ್ನಿಂದಾಗಿ ತಂದೆಗೆ ಆಂಧ್ರದಿಂದ ಬರಲು ಸಾಧ್ಯವಾಗಿರಲಿಲ್ಲ. ಆರೋಗ್ಯ ಸ್ಥಿತಿ ತುಂಬಾ ಗಂಭೀರವಾದ ಕಾರಣ ಚರಣನನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 6ದಿನ ಜೀವನ್ಮರಣದ ಹೋರಾಟ ನಡೆಸಿದ ಚರಣ ಮಂಗಳವಾರ ಮೃತಪಟ್ಟಿದ್ದಾನೆ. ಕೊನೆಯುಸಿರೆಳೆಯುವ ಮುನ್ನ ತಂದೆ ನೋಡಬೇಕು ಎನ್ನುವ ಮಗನ ಆಸೆ ಈಡೇರಲಿಲ್ಲ. ಊರಿಗೆ ಬರಲು ಪಾಸ್ ಪಡೆದು ಅಲ್ಲಿಂದ ಹೊರಟಿರುವ ಲೋಕಪ್ಪಗೆ ಮಗನನ್ನು ಮಾತನಾಡಿಸುವ ಯೋಗವಿಲ್ಲ. ಲೋಕಪ್ಪ ಬಂದ ಬಳಿಕ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.