More

    ಮುಂಬೈನಿಂದ ಕಳ್ಳ ದಾರಿ ಹಿಡಿದು ಬಂದವರಿಗೀಗ ಫಜೀತಿ

    ತೆಲಸಂಗ (ಬೆಳಗಾವಿ): ಯಾವುದೇ ಅನುಮತಿ ಇಲ್ಲದೆ ಮುಂಬೈನಿಂದ ಮಿನಿ ಗೂಡ್ಸ್ ವಾಹನವೊಂದನ್ನು ಬಾಡಿಗೆ ಪಡೆದು ಆಗಮಿಸಿದ್ದ 27 ಕೂಲಿ ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಹೊರವಲಯದ ಚೆಕ್‌ಪೋಸ್ಟ್‌ನಲ್ಲಿ ಇವರೆಲ್ಲ ಸಿಕ್ಕು ಬಿದ್ದಿದ್ದು, ಚಾಲಕ ಅವರನ್ನೆಲ್ಲ ಮಂಗಳವಾರ ಮಧ್ಯಾಹ್ನ ರಸ್ತೆಯ ಮೇಲೆಯೇ ಇಳಿಸಿ ಹೊರಟುಹೋಗಿದ್ದಾನೆ.

    ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮದ ನಿವಾಸಿಗಳಾದ ಈ 27 ಕೂಲಿ ಕಾರ್ಮಿಕರು ಇದೀಗ ಅತ್ತಲೂ ಇಲ್ಲ ಇತ್ತಲೂ ಇಲ್ಲ ಎನ್ನುವಂತಾಗಿದ್ದು, ಬೀದಿಯಲ್ಲೇ ಉಳಿಯಬೇಕಾದ ಪ್ರಸಂಗ ಎದುರಾಗಿದೆ.

    ಮುಂಬೈ ಸರ್ಕಾರದಿಂದ ಅನುಮತಿ ಪಡೆಯದಿರುವ 27 ಕೂಲಿ ಕಾರ್ಮಿಕರನ್ನು, ‘ಮೆಡಿಸಿನ್ಸ್ ಆ್ಯಂಡ್ ಸ್ಯಾನಿಟೈಸರ್ ಸಪ್ಲೈ’ ಎಂದು ಪ್ಲಸ್ ಚಿಹ್ನೆಯುಳ್ಳ ಜೆರಾಕ್ಸ್ ಹಾಳೆಯನ್ನು ವಾಹನದ ಮುಂಭಾಗದ ಗ್ಲಾಸಿಗೆ ಅಂಟಿಸಿಕೊಂಡು ಚಾಲಕ ಬಂದಿದ್ದಾನೆ.

    ಇದನ್ನೂ ಓದಿ ಈ ವ್ಯಕ್ತಿಗೆ ಬಿಲ್ ನೋಡಿ ಕರೆಂಟ್ ಹೊಡೆದಂಗಾಯ್ತು!

    ಅಲ್ಲದೆ, ಜನರನ್ನು ಹಿಂಭಾಗದಲ್ಲಿ ಕುಳ್ಳಿರಿಸಿ ತಾಡಪಾಲು ಹೊದೆಸಿ ಹತ್ತಾರು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಮುಂಬೈನಿಂದ ತೆಲಸಂಗವರೆಗೆ ಬಂದಿದ್ದಾನೆ! ಇನ್ನೆರಡು ಚೆಕ್‌ಪೋಸ್ಟ್ ದಾಟಿದ್ದರೆ ಮುಂಬೈನಿಂದ ಬಂದವರೆಲ್ಲ ಸ್ವಗ್ರಾಮ ತಲುಪುತ್ತಿದ್ದರು.

    ತೆಲಸಂಗ ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿರುವುದರಿಂದ ಇವರೆಲ್ಲ ಸಿಲುಕಿಕೊಳ್ಳುವಂತಾಗಿದೆ. ಓರ್ವ ಗರ್ಭಿಣಿ, ಮಕ್ಕಳು, ಮರಿಮಕ್ಕಳನ್ನು ಕಟ್ಟಿಕೊಂಡು ಸ್ವಗ್ರಾಮ ಸೇರಲು ಅಕ್ರಮ ದಾರಿ ಹಿಡಿದು ಬಂದಿದ್ದ ಮಹಿಳಾ ಕಾರ್ಮಿಕರು ರಸ್ತೆಯಲ್ಲೇ ಕಣ್ಣೀರು ಹಾಕಿದರು.

    ಈ ವಿಚಾರವಾಗಿ ತೆಲಸಂಗ ಉಪತಹಸೀಲ್ದಾರ್ ಎಂ.ಎಸ್. ಯತ್ನಟ್ಟಿ ಪ್ರತಿಕ್ರಿಯಿಸಿ, ‘ಮುಂಬೈನಿಂದ ಬಂದ ಇವರನ್ನೆಲ್ಲ ತೆಲಸಂಗದಲ್ಲಿಯೇ ಕ್ವಾರಂಟೈನ್ ಮಾಡಲಾಗುವುದು. ನಾಳೆ ಈ ಕುರಿತು ಜಿಲ್ಲಾಡಳಿತದ ಸಲಹೆಯಂತೆ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

    ಇದನ್ನೂ ಓದಿ ಸಿದ್ಧವಾಗಿರಿ… ಹೊಸ ನಿಯಮಗಳೊಂದಿಗೆ ಜಾರಿಯಾಗಲಿದೆ ಲಾಕ್​ಡೌನ್​ 4.0: ಪ್ರಧಾನಿ ಮೋದಿ

    ವಾಹನ ಚಾಲಕ ಇವರನ್ನು ಚೆಕ್‌ಪೋಸ್ಟ್ ಬಳಿಯೇ ಬಿಟ್ಟು ಹೋದ ವಿಚಾರ ಪಿಡಿಒ ಬೀರಪ್ಪ ಕಡಗಂಚಿ ಗಮನಕ್ಕೆ ಬರುತ್ತಿದ್ದಂತೆ, ಸ್ವಂತ ಖರ್ಚಿನಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

    ಮಹಾರಾಷ್ಟ್ರಕ್ಕೆ ಗುಳೆ ಹೋಗಿದ್ದ ಕೂಲಿ ಕಾರ್ಮಿಕರು 2 ತಿಂಗಳಿಂದ ಲಾಕ್‌ಡೌನ್ ಪರಿಣಾಮದಿಂದ ದಿಕ್ಕಿಲ್ಲದೆ ಸ್ವ ಗ್ರಾಮ ಸೇರಲು ವಾಮ ಮಾರ್ಗ ಹುಡುಕುತ್ತಿದ್ದಾರೆ. ಮಹಾರಾಷ್ಟ್ರದದಿಂದ ಹೊಲ-ಗದ್ದೆಗಳ ಮೂಲಕ ಸಾವಿರಾರು ಜನರು ತೆಲಸಂಗ ಗಡಿ ಮೂಲಕ ವಿಜಯಪುರ ಜಿಲ್ಲೆ ಸೇರುತ್ತಿದ್ದಾರೆ.

    ಅಕ್ರಮವಾಗಿ ರಾಜ್ಯ ಪ್ರವೇಶಿಸದಂತೆ ಮೊದಲೇ ಚೆಕ್‌ಪೋಸ್ಟ್‌ಗಳಲ್ಲಿ ತಡೆಯುವುದು ಅಥವಾ ಬಂದವರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಹೊಲ-ಗದ್ದೆಗಳ ಮೂಲಕ ಸ್ವಗ್ರಾಮ ಸೇರಿ ಕರೊನಾ ವೈರಸ್ ಹರಡಲು ಇಂಥವರೆಲ್ಲ ಕಾರಣವಾಗಬಹುದು ಎನ್ನುತ್ತಿದ್ದಾರೆ ಸ್ಥಳೀಯರು.

    VIDEO|ದೀದಿ ನಾಡಿನಲ್ಲಿ ಹಿಂದುಗಳ ಮೇಲೆ ಹಿಂಸಾಚಾರ; ಮನೆಗಳಿಗೆ ಬೆಂಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts