More

    ಬಣ್ಣದ ರಾಖಿಗೂ ಕರೊನಾ ಕರಿನೆರಳು

    ಬೆಳಗಾವಿ : ಸಹೋದರ- ಸಹೋದರಿಯರ ಭಾತೃತ್ವ ಸಾರುವ ರಕ್ಷಾ ಬಂಧನಕ್ಕೆ ಇನ್ನೊಂದೇ ದಿನ ಬಾಕಿ ಇದೆ. ಆದರೆ, ಕಳೆದ ನಾಲ್ಕೈದು ತಿಂಗಳಿನಿಂದ ಕಾಡುತ್ತಿರುವ ಕರೊನಾ, ಬಾಂಧವ್ಯ ಬೆಸೆಯುವಲ್ಲಿಯೂ ಇನ್ನಿಲ್ಲದ ಭೀತಿ ಹುಟ್ಟಿಸಿದೆ. ಅಂಗಡಿಗಳಲ್ಲಿ ಚಿತ್ತಾಕರ್ಷಕವಾಗಿ ಮನ ಸೆಳೆಯುವ ಬಣ್ಣ ಬಣ್ಣದ ರಾಖಿಗಳ ಮೇಲೂ ಕರೊನಾ ಕರಿನೆರಳು ಮೂಡಿದೆ.

    ವರ್ಷಕ್ಕೊಮ್ಮೆ ಸಹೋದರನಿಗೆ ರಾಖಿ ಕಟ್ಟಿ, ತನ್ನ ರಕ್ಷಣೆಯ ವಚನ ಪಡೆಯುವ ಸಂಪ್ರದಾಯ ಆಚರಿಸುತ್ತಿದ್ದ ಸಹೋದರಿಯರ ಸಂಭ್ರಮಕ್ಕೆ ಈ ಬಾರಿ ಕರೊನಾ ವಿಘ್ನ ತಂದೊಡ್ಡಿದೆ. ನೂಲ ಹುಣ್ಣಿಮೆಗೆ ಏಳೆಂಟು ದಿನಗಳಿರುವಾಗಲೇ ಮಾರುಕಟ್ಟೆಯಲ್ಲಿ ರಾಖಿ ಖರೀದಿಗೆ ಮುಗಿಬೀಳುತ್ತಿದ್ದ ಬಹುತೇಕ ಮಹಿಳೆಯರು, ಈ ಬಾರಿ ಕರೊನಾ ವೈರಸ್ ಭೀತಿಯಿಂದಾಗಿ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ.

    ಮಾರಾಟ ಕುಸಿತ: ಬೆಳಗಾವಿಯ ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಾಕತಿವೇಸ್ ರೋಡ್, ಖಡೇಬಜಾರ್ ಹಾಗೂ ಪಾಂಗುಳಗಲ್ಲಿಯ ಮಾರುಕಟ್ಟೆಯಲ್ಲಿ ಹೇರಳವಾಗಿ ರಾಖಿ ಸಂಗ್ರಹವಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಖರೀದಿ ನಡೆಯುತ್ತಿಲ್ಲ. ಸಾಕಷ್ಟು ಜನರು ಈಗಾಗಲೇ ಸುರಕ್ಷತಾ ದೃಷ್ಟಿಯಿಂದ ಆನ್‌ಲೈನ್ ಮೂಲಕ ರಾಖಿ ಖರೀದಿಸಿದ್ದಾರೆ. ಜತೆಗೆ ಈ ಮೊದಲು ಶಾಲಾ-ಕಾಲೇಜ್ ಆರಂಭವಾಗುತ್ತಿದ್ದ ಕಾರಣ, 5 ಹಾಗೂ 10 ರೂ.ಗಳ ರಾಖಿ ಮಾರಾಟ ಹೆಚ್ಚಾಗಿರುತ್ತಿತ್ತು. ಈಗ ಶೆಕ್ಷಣಿಕ ವರ್ಷವೇ ಆರಂಭವಾಗದ ಕಾರಣ, ಕಡಿಮೆ ಬೆಲೆಯ ರಾಖಿಗಳ ಮಾರಾಟವೂ ಕುಸಿದಿದೆ.

    ಬೇಡಿಕೆ ಇಲ್ಲದಕ್ಕೆ ಬೇಸರ: ಲಾಕ್‌ಡೌನ್ ಸಡಿಲಿಕೆಯಾದರೂ ವ್ಯಾಪಾರ ಈ ಹಿಂದಿನಂತೆ ನಡೆಯುತ್ತಿಲ್ಲ. ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಗ್ರಾಹಕರು ನಗರದ ಮಾರುಕಟ್ಟೆಗೆ ಬರುತ್ತಿಲ್ಲ. ಬರುವ ಗ್ರಾಹಕರೂ ತೀರಾ ಅಗತ್ಯವಿರುವ ಸಾಮಗ್ರಿಗಳನ್ನಷ್ಟೇ ಖರೀದಿಸುತ್ತಿದ್ದಾರೆ. ಹೀಗಾಗಿ ತಂದಿರುವ ಅರ್ಧದಷ್ಟು ರಾಖಿಗಳೂ ಖಾಲಿಯಾಗಿಲ್ಲ. ಭಾನುವಾರವೂ ಮಾರಾಟವಾಗದೇ ಉಳಿದರೆ ಮುಂದಿನ ವರ್ಷಕ್ಕೆ ಇವುಗಳ ಬಣ್ಣ ಹಳತಾಗಿ ಯಾರೂ ಖರೀದಿಸುವುದಿಲ್ಲ ಎಂದು ರಾಖಿ ವ್ಯಾಪಾರಿಯೋರ್ವರು ಬೇಸರ ವ್ಯಕ್ತಪಡಿಸಿದರು.

    ದೀಪಾವಳಿಗಾದರೂ ವ್ಯಾಪಾರ ಚೇತರಿಕೆ ನಿರೀಕ್ಷೆ

    ರಾಖಿ ಹಬ್ಬಕ್ಕಿಂತ ಮೊದಲು ಬರುವ ಫ್ರೆಂಡ್‌ಷಿಪ್ ಡೇ ಬ್ಯಾಂಡ್‌ಗಳಿಗೂ ಈ ಬಾರಿ ಬೇಡಿಕೆಯಿಲ್ಲ. ಶಾಲೆಯಿದ್ದರೆ ಮಕ್ಕಳು ಹೆಚ್ಚು ಬ್ಯಾಂಡ್‌ಗಳನ್ನು ಒಯ್ಯುತ್ತಿದ್ದರು. ಆನಂತರ ರಾಖಿ ಹಬ್ಬಕ್ಕೂ ಬಲು ಬೇಡಿಕೆ ಇರುತ್ತಿದ್ದುದರಿಂದ ಮಹಾರಾಷ್ಟ್ರದಿಂದ ಅತ್ಯಾಕರ್ಷಕ ರಾಖಿಗಳನ್ನು ಖರೀದಿಸಿ ತಂದು ವ್ಯಾಪಾರಿಗಳು ಮಾರಾಟಕ್ಕೆ ಇಡುತ್ತಿದ್ದರು. ಆದರೆ, ಕರೊನಾ ಕಾರಣದಿಂದಾಗಿ ಹೊರರಾಜ್ಯಗಳಿಂದ ಆಕರ್ಷಕ ರಾಖಿಗಳನ್ನು ತರಿಸಿಲ್ಲ. ಸದ್ಯ ಮಾರಾಟಕ್ಕಿಟ್ಟಿರುವ ರಾಖಿಗಳ ಪೈಕಿ ಹಲವು ಚೀನಾ ಉತ್ಪಾದನೆ ಎಂಬ ಕಾರಣಕ್ಕೂ ಶೇ. 70ರಷ್ಟು ಗ್ರಾಹಕರು ತಿರಸ್ಕರಿಸುತ್ತಿದ್ದಾರೆ. ಮುಂಬರುವ ದೀಪಾವಳಿಗಾದರೂ ವ್ಯಾಪಾರ ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಬೆಳಗಾವಿ ನಗರ ವರ್ತಕರು.

    ಪ್ರತಿವರ್ಷ ರಕ್ಷಾ ಬಂಧನಕ್ಕೆ 70 ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ತರಹೇವಾರಿ ರಾಖಿ ಮಾರಾಟ ಮಾಡುತ್ತಿದ್ದೆ. ನಾಲ್ಕೈದು ದಿನ ಮೊದಲೇ ಯುವತಿಯರು ಖರೀದಿ ಮಾಡಿ, ಪೋಸ್ಟ್ ಮಾಡುತ್ತಿದ್ದರು. ಆದರೆ, ಈಗ ಸೋಮವಾರವೇ ಹಬ್ಬವಿದ್ದರೂ ಶನಿವಾರದವರೆಗೂ ಶೇ. 25ರಷ್ಟೂ ವ್ಯಾಪಾರವಾಗಿಲ್ಲ.
    | ವಸಂತ ಪಾಟೀಲ ರಾಖಿ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts