

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನ (ನ.14) ಗೋಪೂಜೆ ಮಾಡಬೇಕು ಎಂದು ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅಂದು ಗೋವುಗಳನ್ನು ಸ್ನಾನ ಮಾಡಿಸಿ ದೇಗುಲಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಬಾಳೆ ಹಣ್ಣು, ಸಿಹಿ ಮುಂತಾದ ಗ್ರಾಸವನ್ನು ಹಸುವಿಗೆ ತಿನ್ನಿಸಿ ಸಂಜೆ 5.30 ರಿಂದ 6.30ರವರೆಗಿನ ಗೋಧೂಳಿ ಲಗ್ನದಲ್ಲಿ ಗೋಪೂಜೆ ನಡೆಸಬೇಕು. ಈ ಬಗ್ಗೆ ದೇವಸ್ಥಾನದ ಸೂಚನಾ ಲಕದಲ್ಲಿ ಮಾಹಿತಿ ಹಾಕಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ದೇವಾಲಯಗಳಲ್ಲಿ ಗೋಪೂಜೆ ಆಯೋಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.