

Gmail Login : ವಾಟ್ಸ್ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ಇತ್ಯಾದಿ ಸಾಮಾಜಿಕ ಜಾಲತಾಣ ವೇದಿಕೆಗಳು ಕಾಲಕಾಲಕ್ಕೆ ತಮ್ಮ ಫೀಚರ್ಗಳ ಕುರಿತು ಅಪ್ಡೇಟ್ ಪಡೆಯುತ್ತಲೇ ಇರುತ್ತವೆ. ಇದೀಗ ಗೂಗಲ್ ಕೂಡ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಮೇಲ್ಗಾಗಿ ಹೊಸ ಅಪ್ಡೇಟ್ ತರಲಿದೆ. ಆ ಅಪ್ಡೇಟ್ ಏನು? ಅದರ ಪ್ರಯೋಜನಗಳೇನು? ಎಂಬುದನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.
ಇಲ್ಲಿಯವರೆಗೆ ಜಿಮೇಲ್ಗೆ ಲಾಗಿನ್ ಆಗುವಾಗ ಬಳಕೆದಾರರ ಗುರುತನ್ನು ಪರಿಶೀಲಿಸಲು ಗೂಗಲ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಆರು ಅಂಕಿಯ ದೃಢೀಕರಣ ಕೋಡ್‌ಗಳನ್ನು SMS ರೂಪದಲ್ಲಿ ಕಳುಹಿಸುತ್ತಿತ್ತು. ಆದರೆ ಶೀಘ್ರದಲ್ಲೇ ಗೂಗಲ್ ಈ ವಿಧಾನವನ್ನು ನಿಲ್ಲಿಸಲಿದೆ.
ನಂಬರ್ ಕೋಡ್ಗಳ ಬದಲಾಗಿ, ಗೂಗಲ್ QR ಕೋಡ್ ಅನ್ನು ಮುಂದೆ ಜಾರಿಗೆ ತರಲಿದೆ. ಬಳಕೆದಾರರ ವಿವರಗಳನ್ನು ಹೆಚ್ಚು ಸುರಕ್ಷಿತವಾಗಿರಿಸಲು ಗೂಗಲ್ ಈ ವಿಧಾನವನ್ನು ಪರಿಚಯಿಸಲಿದೆ ಎಂದು ಮನಿ ಕಂಟ್ರೋಲ್ ವೆಬ್ಸೈಟ್ ವರದಿ ಮಾಡಿದೆ.
ಈ QR ಕೋಡ್ ವ್ಯವಸ್ಥೆ ಜಾರಿಗೆ ಬಂದ ನಂತರ, ನಿಮಗೆ ಆರು-ಅಂಕಿಯ ದೃಢೀಕರಣ ಕೋಡ್ ಬದಲಿಗೆ QR ಕೋಡ್ ಸಿಗುತ್ತದೆ. ಕ್ಯೂಆರ್ ಕೋಡ್ ಬಂದಾಗ ನೀವು ಮಾಡಬೇಕಾಗಿರುವುದು ನಿಮ್ಮ ಫೋನ್‌ನ ಕ್ಯಾಮೆರಾದೊಂದಿಗೆ ಆ ಕೋಡ್ ಅನ್ನು ಸ್ಕ್ಯಾನ್ ಮಾಡುವುದು. ಈ ವಿಧಾನ SMS ಆಧಾರಿತ ವಂಚನೆಯನ್ನು ಕಡಿಮೆ ಮಾಡುತ್ತದೆ. ಸೈಬರ್ ಅಪರಾಧಿಗಳು ಹೆಚ್ಚುತ್ತಿರುವ ಈ ಸಮಯದಲ್ಲಿ Google ಇಂಥದ್ದೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಜಿಮೇಲ್ ಲಾಗಿನ್ ಪ್ರಕ್ರಿಯೆಯಲ್ಲಿನ ಬದಲಾವಣೆಯು QR ಕೋಡ್ ರೂಪದಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಯಾವಾಗ ಜಾರಿಗೆ ಬರುತ್ತದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಅಪ್ಡೇಟ್ ಸಾಧ್ಯವಾದಷ್ಟು ಬೇಗ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)