

ಬಾಳೆಹೊನ್ನೂರು: ಬದುಕು ಒಳಿತು-ಕೆಡಕುಗಳ ಸಮ್ಮಿಶ್ರಣ. ಮನದಲ್ಲಿ ಸತ್ಯ, ಹೃದಯದಲ್ಲಿ ಒಳ್ಳೆಯತನ ಇದ್ದರೆ ನಿತ್ಯ ಸುಖ, ಶಾಂತಿ ಪ್ರಾಪ್ತಿಯಾಗುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ರಂಭಾಪುರಿ ಪೀಠದಲ್ಲಿ ಶ್ರಾವಣ ನಿಮಿತ್ತ ಕೈಗೊಂಡ 32ನೇ ವರ್ಷದ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತಾಳ್ಮೆ, ಹಿರಿಯರ ಮಾರ್ಗದರ್ಶನ, ನಿರಂತರ ಪ್ರಯತ್ನ, ಶ್ರದ್ಧೆ, ಆತ್ಮ ವಿಶ್ವಾಸಗಳು ಯಶಸ್ಸು ಸಾಧಿಸಲು ಅವಶ್ಯಕವಾಗಿರುವ ಅಂಶಗಳು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿಗೆ ಮೌಲ್ಯಾಧಾರಿತ ಚಿಂತನಗಳನ್ನು ಬೋಧಿಸಿದ್ದಾರೆ. ಅವುಗಳನ್ನು ಅನುಸರಿಸಿ ಬಾಳಿದರೆ ಜೀವನ ಸಾರ್ಥಕಗೊಳ್ಳುವುದು ಎಂದು ನುಡಿದರು.
ಆಶಾವಾದಿ ಪ್ರತಿ ವಿಪತ್ತಿನಲ್ಲೂ ಅವಕಾಶ ಹುಡುಕುತ್ತಾನೆ. ನಿರಾಶಾವಾದಿ ಪ್ರತಿ ಅವಕಾಶದಲ್ಲೂ ವಿಪತ್ತನ್ನೇ ಕಾಣುತ್ತಾನೆ. ನಿನ್ನೆ ಸುಖವಿತ್ತೆಂದು ಇತಿಹಾಸ ಹೇಳುತ್ತದೆ. ನಾಳಿಗೆ ಸುಖವಿರುವುದೆಂದು ವಿಜ್ಞಾನ ಹೇಳುತ್ತದೆ. ಮರಕ್ಕೆ ಬೇರಿನಷ್ಟೇ ಮನುಷ್ಯನಿಗೆ ನಂಬಿಕೆ ಮುಖ್ಯ. ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ ಎಂದು ಹೇಳಿದರು.
ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಶಾಂತಿಯಿಂದ ತತ್ತರಿಸುತ್ತಿರುವ ಜಗತ್ತಿಗೆ ಶಾಂತಿ, ನೆಮ್ಮದಿ ಬೇಕಾಗಿದೆ. ಅಧ್ಯಾತ್ಮ ಸಾಧನೆ ಮತ್ತು ಮಹಾನುಭಾವರ ಚಿಂತನೆಗಳನ್ನು ಪರಿಪಾಲಿಸಿದರೆ ಸುಖದ ಬದುಕು ನಿರ್ಮಾಣಗೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮಹತ್ಕಾರ್ಯಗಳು ಜೀವ ಜಗತ್ತಿಗೆ ಸಂಜೀವಿನಿಯಾಗಿವೆ ಎಂದರು.
ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿವಮೊಗ್ಗದ ಎಸ್.ಎಚ್.ಸಿದ್ದಣ್ಣ, ಬೆಂಗಳೂರಿನ ಬಾಳಯ್ಯ ಇಂಡಿಮಠ, ಅರಸೀಕೆರೆ ತಾಲೂಕಿನ ಶಂಕರನಹಳ್ಳಿ ಭಕ್ತರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಬೆಳಗ್ಗೆ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಜರುಗಿತು.