

ಕೆ.ಆರ್.ನಗರ: ಸಾರ್ವಜನಿಕರಿಗೆ ದೇಶದಲ್ಲೇ ಉತ್ತಮ ಸೇವೆ ನೀಡುತ್ತಿರುವ ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರರು, ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕದ ಕನಕ ನೌಕರರ ಬಳಗದ ವತಿಯಿಂದ ಬುಧವಾರ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕನಕದಾಸರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನೌಕರರು ಜಯಂತಿ ಆಚರಣೆ ಮಾಡುವಾಗ ಜಾತ್ಯತೀತವಾಗಿ ಸರ್ವರನ್ನೂ ಒಗ್ಗೂಡಿಸಿ ಕಾರ್ಯಕ್ರಮ ನಡೆಸಬೇಕು, ಆಗ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದರು.
ಎಂಜಿಆರ್‌ಟಿಡಿ ಎಂದು ಇದ್ದ ಸಂಸ್ಥೆಯನ್ನು ಡಿ.ದೇವರಾಜ ಅರಸು ಸಾರಿಗೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯಾಗಿ ನಾಮಕರಣ ಮಾಡಿದರು. ಅಜೀಜ್ ಸೇಠ್ ಅವರು ಇಲಾಖೆಯ ಮಂತ್ರಿಯಾಗಿದ್ದಾಗ ಸಾರಿಗೆ ಸಂಸ್ಥೆ ಸಾಕಷ್ಟು ಬಲಗೊಳ್ಳಲು ಕಾರಣರಾದರು. ಆದ್ದರಿಂದ ನೌಕರರು ಮತ್ತು ಕಾರ್ಮಿಕರು ಈ ಇಬ್ಬರು ನಾಯಕರನ್ನು ಸ್ಮರಿಸಬೇಕು ಎಂದರು.
ನೌಕರರು ಎಚ್ಚರಿಕೆ ವಹಿಸಿ ಕೆಲಸ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದು, ಸಾರಿಗೆ ಸಂಸ್ಥೆ ಉತ್ತಮ ಸೇವೆ ನೀಡುತ್ತಿದ್ದರೂ ಕೆಲ ಸರ್ಕಾರಗಳಲ್ಲಿ ಇಲಾಖೆ ಮಂತ್ರಿಯಾಗಿದ್ದವರು ಮತ್ತು ಅಧಿಕಾರಿಗಳು ಮಾಡುತ್ತಿರುವ ಲೋಪದಿಂದ ನಿಗಮ ನಷ್ಟ ಅನುಭವಿಸುವಂತಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸಹಕಾರ ಮಂತ್ರಿಯಾಗಿದ್ದಾಗ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಿದ್ದರಿಂದ ಮಹಿಳೆಯರು ಆರ್ಥಿಕವಾಗಿ ಬಲಿಷ್ಠಗೊಳ್ಳಲು ಸಾಧ್ಯವಾಯಿತು. ಇಂದು ಸಿದ್ದರಾಮಯ್ಯ ಅವರ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿರುವುದರಿಂದ ಮಹಿಳೆಯರು ರಾಜ್ಯ ಸುತ್ತುವಂತಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಜಾತಿರಹಿತ ಸಮಾಜ ನಿರ್ಮಾಣ ಮಾಡಲು ದುಡಿದ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಜಯಂತಿ ಆಚರಣೆ ಮಾಡುವಾಗ ಸರ್ವರೂ ಪಾಲ್ಗೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಸಾರಿಗೆ ಸಂಸ್ಥೆಯ ನೌಕರರಿಗೆ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೆಲಸದ ಒತ್ತಡ ಹೆಚ್ಚಾಗಿದ್ದರೂ ಉತ್ತಮ ಸೇವೆ ನೀಡುತ್ತಿರುವ ನೌಕರರಿಗೆ ಸಮಸ್ಯೆಗಳು ಎದುರಾದಾಗ ಘಟಕಕ್ಕೆ ಬಂದು ಸಮಸ್ಯೆ ಆಲಿಸಿ ಅವುಗಳ ಪರಿಹಾರಕ್ಕೆ ಶ್ರಮಿಸುತ್ತೇನೆ. ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರ 5,500 ಹೊಸ ಬಸ್‌ಗಳನ್ನು ಖರೀದಿ ಮಾಡಲಿದ್ದು, ವಿತರಣೆ ಮಾಡುವ ಸಂದರ್ಭದಲ್ಲಿ ಕೆ.ಆರ್.ನಗರ ಘಟಕಕ್ಕೆ ಹೆಚ್ಚು ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್, ಹೊಸ ಬಸ್‌ಗಳು ಬಂದ ನಂತರ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಜನತೆಗೆ ಬಸ್‌ಗಳ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ ಮಾತನಾಡಿದರು. ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಟಿಎಪಿಸಿಎಂಎಸ್ ನಿರ್ದೇಶಕ ಡಿ.ಸಿ.ರವಿ, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಪಿ.ಮಹೇಶ್, ಕನಕ ನೌಕರರ ಬಳಗದ ಪದಾಧಿಕಾರಿಗಳಾದ ಶಿವಾನಂದಪುರಿ, ಅಶೋಕ್, ರವಿಚಂದ್ರ, ಶಂಕರ್‌ಗುರು ಮತ್ತಿತರರು ಹಾಜರಿದ್ದರು.