ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆ

Rain
Published on

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದೆ. ಕಳೆದ ವರ್ಷ ಜೂನ್ ಮತ್ತು ಜುಲೈ ತಿಂಗಳ ಅವಧಿಗೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 474 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 389 ಮಿಮೀ ಮಳೆಯಾಗಿ ಶೇ.18 ಕೊರತೆಯಾಗಿತ್ತು. ಈ ಬಾರಿ ಇದೇ ಅವಧಿಯಲ್ಲಿ 471 ಮಿಮೀ ಮಳೆ ಆಗಬೇಕಿತ್ತು. 445 ಮಿಮೀ ಆಗಿದೆ. ಶೇ.5 ಕಡಿಮೆಯಾದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕಳೆದ ವರ್ಷ ಕರಾವಳಿಯಲ್ಲಿ ಶೇ.13 ಕಡಿಮೆ ಮಳೆಯಾಗಿತ್ತು. ಈ ಬಾರಿ 1623 ಮಿಮೀ ಆಗಿದ್ದು, ಶೇ.18 ಕಡಿಮೆ. ಮಲೆನಾಡಿನಲ್ಲಿ ಕಳೆದ ವರ್ಷ ಶೇ.32 ಕಡಿಮೆಯಾಗಿದ್ದ ಮಳೆ ಈ ವರ್ಷ 587 ಮಿಮೀ ಸುರಿದಿದ್ದು, ಶೇ.38 ಕೊರತೆಯಾಗಿದೆ. ಉತ್ತರ ಒಳನಾಡಿನಲ್ಲಿ ಈ ವರ್ಷ ವಾಡಿಕೆಕ್ಕಿಂತ ಶೇ.36 ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.72 ಹೆಚ್ಚು ಮಳೆಯಾಗಿದೆ ಎಂದು ಕೇಂದ್ರದ ಅಧಿಕಾರಿ ಗಾವಸ್ಕಾರ್ ಮಾಹಿತಿ ನೀಡಿದ್ದಾರೆ.

ಈ ಬಾರಿ ವಾಡಿಕೆಯಂತೆ ಮುಂಗಾರು ಪ್ರವೇಶಿಸಿತು. ಆರಂಭದಲ್ಲಿ ಮುಂಗಾರು ಮಾರುತಗಳು ದುರ್ಬಳಗೊಂಡಿತ್ತು. ಬಳಿಕ, ಚುರುಕುಗೊಂಡಿತ್ತು. ಹೀಗಾಗಿ, ಕೆಲ ಜಿಲ್ಲೆಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಮಳೆಯಾದರೆ ಉಳಿದ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಯಿತು. ಇನ್ನೂ 2 ತಿಂಗಳು ಮುಂಗಾರು ಮಳೆ ಇರಲಿದ್ದು, ಮತ್ತಷ್ಟು ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯಲ್ಲಿ ಭಾರಿ ಮಳೆ: ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ. ಕರವಾಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಆ.1ರಿಂದ ಆ.5ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ ಹಾಗೂ ವಿಜಯಪುರದಲ್ಲಿ ಮುಂದಿನ 1 ದಿನ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಮುಂದಿನ ಒಂದು ದಿನ ಯೆಲ್ಲೋ ಘೋಷಿಸಲಾಗಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net