

ಬೆಂಗಳೂರು: ಕಡಿಮೆ ವೇತನದಲ್ಲೇ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಜ್ಯದ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಸಂಕ್ರಾಂತಿಯ ಉಡುಗೊರೆ ನೀಡಿದೆ. ಇವರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿ ವೇತನವನ್ನು ಸುಮಾರು ಎರಡೂವರೆ ಪಟ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲ; ಸದ್ಯ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 14,578 ಅತಿಥಿ ಉಪನ್ಯಾಸಕರನ್ನು ಸೆಮಿಸ್ಟರ್ವಾರು ಪದ್ಧತಿ ಬದಲಿಗೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿಕೊಳ್ಳುವುದಾಗಿ ಘೊಷಣೆ ಹೊರಡಿಸಿದೆ. ಸರ್ಕಾರದ ಈ ಕೊಡುಗೆಯಿಂದ ತೃಪ್ತರಾಗದ ಅತಿಥಿ ಉಪನ್ಯಾಸಕರು ಮಾತ್ರ ಪ್ರತಿಭಟನೆ ಮುಂದುವರಿಸುವ ಚಿಂತನೆ ನಡೆಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸರ್ಕಾರದ ಪರವಾಗಿ ಶುಕ್ರವಾರ ವಿಧಾನಸೌಧದಲ್ಲಿ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಯುಜಿಸಿ ನಿಗದಿತ ಶೈಕ್ಷಣಿಕ ಅರ್ಹತೆ ಇದ್ದು, 5 ವರ್ಷ ಮತ್ತು ಅದಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರು ಇನ್ನು ಮುಂದೆ ಮಾಸಿಕ 32 ಸಾವಿರ ರೂ. ಹಾಗೂ ಅದಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವವರು ಮಾಸಿಕ 30 ಸಾವಿರ ರೂ. ಗೌರವಧನ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಯುಜಿಸಿ ಬಯಸುವ ಶೈಕ್ಷಣಿಕ ಅರ್ಹತೆ ಹೊಂದದಿದ್ದರೂ, 5 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 28 ಸಾವಿರ ರೂ. ಮತ್ತು ಅದಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವವರಿಗೆ ಮಾಸಿಕ 26 ಸಾವಿರ ರೂ. ಗೌರವಧನ ನಿಗದಿಪಡಿಸಲಾಗಿದೆ.
ಜತೆಗೆ, ಇವರು ನಿಗದಿತ ಶೈಕ್ಷಣಿಕ ಅರ್ಹತೆ ಗಳಿಸಿಕೊಳ್ಳಲು 3 ವರ್ಷಗಳ ಕಾಲಾವಕಾಶ ನೀಡಲಾಗಿದೆ ಎಂದರು. ಇದುವರೆಗೆ ಯುಜಿಸಿ ನಿಗದಿತ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು ತಿಂಗಳಿಗೆ 13 ಸಾವಿರ ರೂ. ಮತ್ತು ಮಿಕ್ಕವರು 11 ಸಾವಿರ ರೂ. ಗೌರವಧನ ಪಡೆಯುತ್ತಿದ್ದರು.
ದಶಕಗಳ ಸಮಸ್ಯೆ: ಅತಿಥಿ ಉಪನ್ಯಾಸಕರ ಸಮಸ್ಯೆ 2002ರಿಂದಲೂ ಇತ್ತು. ಆದರೆ, ಹಿಂದಿನ ಸರಕಾರಗಳು ಇದನ್ನು ಸರಿಯಾಗಿ ನಿಭಾಯಿಸದೆ ಇದ್ದುದರಿಂದ ಕಗ್ಗಂಟಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹಾನುಭೂತಿ ಮತ್ತು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿದರು. ಇದರಿಂದಾಗಿ ಕೇವಲ ಒಂದು ತಿಂಗಳಲ್ಲಿ ಪರಿಹಾರ ರೂಪಿಸುವುದು ಸಾಧ್ಯವಾಯಿತು ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಉಪಸ್ಥಿತರಿದ್ದರು.
ಇದೊಂದು ಐತಿಹಾಸಿಕ ತೀರ್ವನ. ಇದಕ್ಕೆ ಮಿಂಚಿನ ವೇಗದಲ್ಲಿ ಪರಿಹಾರ ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ಉಪನ್ಯಾಸಕರು ಈ ಸಮಾಜದ ಸಂಪತ್ತು. ಅವರ ನೆಮ್ಮದಿಯೇ ಸಮಾಜದ ನೆಮ್ಮದಿ. | ಡಾ.ಸಿ.ಎನ್. ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ ಗೌರವ ಧನ ಹೆಚ್ಚಳ ನಮಗೆ ಸಿಹಿ ಸುದ್ದಿ ಅಲ್ಲ, ಕಹಿ ಸುದ್ದಿ. ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ನಾವು ಕೇಳಿದ್ದು 12 ತಿಂಗಳ ಸಂಬಳ ಹಾಗೂ ಸೇವಾ ಭದ್ರತೆ. ಕೇವಲ ಗೌರವ ಧನ ಹೆಚ್ಚಿಸಲು ಸಮಿತಿ ಮಾಡುವ ಅಗತ್ಯವಿತ್ತೆ? ಹೋರಾಟ ಮುಂದುವರಿಸಲು ಚಿಂತನೆ ನಡೆಸುತ್ತೇವೆ. | ಹನುಮಂತಗೌಡ ಕಲ್ಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ.
ಇನ್ಮುಂದೆ 10ರೊಳಗೆ ವೇತನ: ಅತಿಥಿ ಉಪನ್ಯಾಸಕರಿಗೆ ಇನ್ನು ಪ್ರತೀ ತಿಂಗಳು 10 ರೊಳಗೆ ವೇತನ ಪಾವತಿ ಆಗಲಿದೆ. ಇದಲ್ಲದೆ, ಅತಿಥಿ ಉಪನ್ಯಾಸಕರ ಸುಗಮ ನೇಮಕಾತಿಗೆ ಆನ್ಲೈನ್ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಇದರಲ್ಲಿ ಜ.17ರಿಂದ ಅರ್ಜಿ ಹಾಕಿಕೊಳ್ಳಬಹುದು. ಇದಕ್ಕೆ ಒಂದು ವಾರ ಕಾಲಾವಕಾಶವಿದ್ದು, ಅಭ್ಯರ್ಥಿಗಳು ತಮ್ಮ ಇಷ್ಟದ 5 ಸರ್ಕಾರಿ ಕಾಲೇಜುಗಳನ್ನು ಸೂಚಿಸಲು ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಸೂಕ್ತ ಕಾರ್ಯಭಾರ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಸಮಿತಿ ವರದಿ ಅನುಷ್ಠಾನ: ಅತಿಥಿ ಉಪನ್ಯಾಸಕರ ಸಮಸ್ಯೆ / ಬೇಡಿಕೆಗಳ ಪರಿಹಾರಕ್ಕಾಗಿ ಸರ್ಕಾರ ತಿಂಗಳ ಹಿಂದೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯ ವರದಿ ಅನುಷ್ಠಾನಕ್ಕೆ ಸಿಎಂ ಸಮ್ಮತಿಸಿದ್ದಾರೆ ಎಂದು ಅಶ್ವತ್ಥನಾರಾಯಣ ಹೇಳಿದರು.