ಮುಟ್ಟಿನ ದೋಷ ಮತ್ತು ಹೊಟ್ಟೆಯ ಬೊಜ್ಜಿಗೆ ಇದು ರಾಮಬಾಣ!

1147077
Published on

ಕಿಬ್ಬೊಟ್ಟೆಯ ಮತ್ತು ಗರ್ಭಾಶಯದ ಅಂಗಗಳಿಗೆ ಉತ್ತಮ ಮಸಾಜ್​, ವ್ಯಾಯಾಮ ದೊರಕುವ ಆಸನವೇ ಮಂಡೂಕಾಸನ. ಮಂಡೂಕ ಎಂದರೆ ಸಂಸ್ಕೃತದಲ್ಲಿ ಕಪ್ಪೆ ಎಂದು. ಕಪ್ಪೆಯ ಆಕಾರವನ್ನು ಹೋಲುವ ಭಂಗಿ ಇದು. ಸ್ತ್ರೀಯರ ಮುಟ್ಟಿನ ದೋಷಗಳನ್ನು ನಿವಾರಣೆ ಮಾಡುವಲ್ಲಿ, ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಸಹಾಯಕವಾದ ಆಸನವಿದು.

ಅಭ್ಯಾಸ ಕ್ರಮ : ಕಾರ್ಪೆಟ್​ ಮೇಲೆ ಮಂಡಿಗಳನ್ನು ಮಡಿಸಿಕೊಂಡು ಕೂರುವುದು. ಮಂಡಿಗಳನ್ನು ವಿಸ್ತರಿಸಿ, ಹಸ್ತವನ್ನು ನೆಲದ ಮೇಲೆ ಊರುವುದು. ಉಸಿರನ್ನು ತೆಗೆದುಕೊಳ್ಳುತ್ತಾ ಹಿಂದಕ್ಕೆ ಬಾಗಿ, ಉಸಿರು ಬಿಡುತ್ತಾ ನಿಧಾನವಾಗಿ ಮುಂದಕ್ಕೆ ಶಿಸ್ತುಬದ್ಧವಾಗಿ ಬಾಗಬೇಕು. ಈ ಸಮಯದಲ್ಲಿ ನೆಲದ ಮೇಲೆ ಕೈಗಳನ್ನು ಆದಷ್ಟೂ ಚಾಚಬೇಕು. ಸ್ವಲ್ಪ ಸಮಯ ಕಣ್ಣು ಮುಚ್ಚಿ ಸಾಮಾನ್ಯ ಉಸಿರಾಟ ನಡೆಸುತ್ತಾ, ಈ ಸ್ಥಿತಿಯಲ್ಲಿರಬೇಕು. ನಂತರ ಉಸಿರು ತೆಗೆದುಕೊಳ್ಳುತ್ತಾ ನಿಧಾನವಾಗಿ ಸ್ವಸ್ಥಾನಕ್ಕೆ ಹಿಂತಿರುಗಬೇಕು. ಸ್ವಲ್ಪ ಅಭ್ಯಾಸವಾದ ಮೇಲೆ 2-3 ಬಾರಿ ಮಾಡಿ ವಿಶ್ರಮಿಸಬಹುದು.

ಇತರ ಪ್ರಯೋಜನಗಳು : ಮಲಬದ್ಧತೆ, ಅಜೀರ್ಣ ಸಮಸ್ಯೆ, ಗ್ಯಾಸ್​ ಸಮಸ್ಯೆ ನಿವಾರಿಸುತ್ತದೆ. ಮೇದೋಜೀರಕ ಗ್ರಂಥಿ ಉತ್ತೇಜನಗೊಂಡು ಮಧುಮೇಹ ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಎದೆ, ಭುಜಗಳಿಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಶಿರಸ್ಸಿಗೆ ರಕ್ತ ಸಂಚಲನೆ ಹೆಚ್ಚಿ ನರಮಂಡಲ ಸಚೇತನಗೊಳ್ಳುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ.

ಈ ಆಸನವನ್ನು ಬೆನ್ನು ನೋವು, ಸೊಂಟ ನೋವು ಅಥವಾ ಹೊಟ್ಟೆಯ ಹುಣ್ಣಿದ್ದವರು ಮಾಡುವುದು ಸೂಕ್ತವಲ್ಲ. ಪಾದದ ಗಾಯ, ತೀವ್ರ ರಕ್ತದೊತ್ತಡ ಹಾಗೂ ಅತಿ ಮೈಗ್ರೇನ್​ ಇದ್ದವರು ಮಾಡುವುದು ಬೇಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net