ಅಣ್ಣಮ್ಮ ದೇವಸ್ಥಾನದಲ್ಲಿ ಭಕ್ತೆಯ ಚಿನ್ನಾಭರಣ ಕಳವು

anamma
Published on

ಬೆಂಗಳೂರು: ಮೆಜೆಸ್ಟಿಕ್ ಅಣ್ಣಮ್ಮ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಬಂದಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 300 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ.

ಕಲುಬುರಗಿ ಮೂಲದ ಚಂದ್ರಪ್ರಭಾ ಧಮ್ಮೂರ್, ಚಿನ್ನಾಭರಣ ಕಳೆದುಕೊಂಡ ಭಕ್ತೆ. ವಿವಿಧ ಬಗೆಯ 12.56 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನಾಬರಣ ಕಳವಾಗಿದ್ದು, ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಟೋಬರ್ 26ರ ಸಂಜೆ 6 ಗಂಟೆಯಲ್ಲಿ ಚಂದ್ರಪ್ರಭಾ, ಮಾರತ್‌ಹಳ್ಳಿಯಲ್ಲಿ ಇರುವ ಮಗನ ಮನೆಗೆ ಹೋಗಲು ಕಲುಬುರಗಿಯಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಿದ್ದರು. ಮೆಜೆಸ್ಟಿಕ್‌ನಲ್ಲಿ ಇರುವ ಅಣ್ಣಮ್ಮ ದೇವರ ದರ್ಶನ ಪಡೆದು ಮಗನ ಹೋಗುವ ಸಲುವಾಗಿ ದೇವಸ್ಥಾನಕ್ಕೆ ಹೋಗಿದ್ದರು.

ದೇವಸ್ಥಾನದ ಒಳಗೆ ಹೋಗಿ ವಾಪಸ್ ಬಂದು ವ್ಯಾನಿಟಿ ಬ್ಯಾಗ್ ಚೆಕ್ ಮಾಡಿಕೊಂಡಾಗ ಅದರಲ್ಲಿದ್ದ ಚಿನ್ನಾಭರಣ ಕಳವಾಗಿತ್ತು. ದೇಗುಲದಲ್ಲಿ ಹೆಚ್ಚು ಜನ ಇದ್ದ ಕಾರಣಕ್ಕೆ ಭಕ್ತರ ಸೋಗಿನಲ್ಲಿ ಕಳ್ಳರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ಸಾಧ್ಯತೆ ಇರುವುದಾಗಿ ಚಂದ್ರಪ್ರಭಾ, ದೂರಿನಲ್ಲಿ ಆರೋಪಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net