ಮನೆಗೆ ಬಂದ ಅತಿಥಿಗಳು ರೂಂನಲ್ಲಿದ್ದದ್ದು 20 ನಿಮಿಷ; ನಂತರ ಮನೆಯವರೇ ಹೋಗಬೇಕಾಯ್ತು ಪೊಲೀಸ್ ಠಾಣೆಗೆ!

theft
Published on

ಬೆಂಗಳೂರು: ಮನೆಗೆ ಬಂದ ಅತಿಥಿಗಳೆಲ್ಲರೂ ಒಳ್ಳೆಯವರೇ ಆಗಿರುತ್ತಾರೆಂದೇನೂ ಇಲ್ಲ. ಕೆಲವರು ತಾವು ಬಂದ ಕೆಲಸ ಮುಗಿಸಿಕೊಂಡು ಹೋಗಿಬಿಟ್ಟರೆ ಇನ್ನು ಕೆಲವರು ಮನೆಯ ‘ಜಂತಿ ಎಣಿಸುವ’ ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಕುಮಾರಸ್ವಾಮಿ ಲೇಔಟ್‌ನ ಈ ಮನೆಗೆ ಬಂದ ಅತಿಥಿಗಳು ಮಾಡಿದ್ದೂ ಇಂಥದ್ದೇ ಕೆಲಸ.

ಡಿ.6ರ ಮಧ್ಯಾಹ್ನ ಕುಮಾರಸ್ವಾಮಿ ಲೇಔಟ್ ನಿವಾಸಿ ಅನಿಸಾ ಬೇಗಂ ಅವರ ಮನೆಗೆ ಸಂಬಂಧಿಕರಾದ ಸಾಯಿರಾ ಬಾನು ಹಾಗೂ ಮಕ್ಕಳಾದ ಸೈಯದ್ ಸಲ್ಮಾನ್, ಸೈಯದ್ ಇಮ್ರಾನ್ ಬಂದಿದ್ದರು. ಉಭಯ ಕುಶಲೋಪರಿ ಮಾತನಾಡುತ್ತ ಕುಳಿತಿದ್ದಾಗ ಅನಿಸಾ ಇತ್ತೀಚೆಗೆ ತಾವು ಖರೀದಿಸಿದ್ದ ಚಿನ್ನಾಭರಣಗಳ ಬಗ್ಗೆ ಬಾಯಿಬಿಟ್ಟಿದ್ದರು. ಅವುಗಳನ್ನು ತೋರಿಸುವಂತೆ ಸಾಯಿರಾ ಹೇಳಿದ್ದಳು. ಅದರಂತೆ ಅನಿಸಾ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನೂ ತೋರಿಸಿ, ನಂತರ ಎಂದಿನಂತೆ ಲಾಕರ್‌ನಲ್ಲಿ ಇಟ್ಟಿದ್ದರು.

ಸ್ವಲ್ಪ ಸಮಯದ ಬಳಿಕ ತನ್ನ ಮಕ್ಕಳೊಂದಿಗೆ ವೈಯಕ್ತಿಕವಾಗಿ ಕೆಲ ಹೊತ್ತು ಮಾತನಾಡಬೇಕೆಂದು ಹೇಳಿದ ಸಾಯಿರಾ, ಬೆಡ್ ರೂಂಗೆ ಹೋಗಿ ಬಾಗಿಲು ಮುಚ್ಚಿಕೊಂಡಳು. 20 ನಿಮಿಷಗಳ ಬಳಿಕ ಮೂವರೂ ಹೊರಗೆ ಬಂದರು. ರಾತ್ರಿ 10 ಗಂಟೆಗೆ ಮನೆಯಿಂದ ತೆರಳಿದ್ದರು. ಇದಾದ ಬಳಿಕ ಮನೆಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಇರಲಿಲ್ಲ. ಇದರಿಂದ ದಿಕ್ಕು ತೋಚದಂತಾದ ಅನಿಸಾ ಕೂಡಲೇ ಮನೆಗೆ ಬಂದ ಅತಿಥಿಗಳೇ ಚಿನ್ನಾಭರಣ ದೋಚಿದ್ದಾರೆ ಎಂದು ಅನಿಸಾ ಪೊಲೀಸರಿಗೆ ದೂರು ನೀಡಿದ್ದಾರೆ. ಆಭರಣಗಳ ಬೆಲೆ 1.30 ಲಕ್ಷ ರೂ. ಎಂದು ನಮೂದಿಸಿದ್ದಾರೆ. ದೂರಿನ ಆಧಾರದ ಮೇಲೆ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net