

ಮುಂಬೈ: ಭಾರತದಲ್ಲಿ ಚಿನ್ನದ ವಹಿವಾಟು ಚುರುಕುಗೊಂಡಿದ್ದು, ಕಳೆದ ವರ್ಷದ ಆಗಸ್ಟ್ಗೆ ಹೋಲಿಕೆ ಮಾಡಿದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಚಿನ್ನದ ಆಮದು ದುಪ್ಪಟ್ಟುಗೊಂಡಿದೆ. ಚಿನ್ನದ ಬೆಲೆಯೂ ಇಳಿಕೆಯಾಗಿದ್ದು, ಮುಂಬರುವ ಹಬ್ಬಗಳ ಸೀಸನ್ ಹಿನ್ನೆಲೆಯಲ್ಲಿ ಆಭರಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಭರಣ ತಯಾರಕರು ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡುತ್ತಿದ್ದಾರೆ.
ಭಾರತದ ವಿಶ್ವದಲ್ಲೇ ಚಿನ್ನವನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಎರಡನೇ ರಾಷ್ಟ್ರವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಸಾರ್ವಕಾಲಿಕ ಗರಿಷ್ಠಮಟ್ಟದಿಂದ ಶೇ. 12 ಇಳಿಕೆ ದಾಖಲಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 2072 ಡಾಲರ್ಗೆ ಮಾರಾಟವಾಗುತ್ತಿದೆ. ಭಾರತ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 63 ಟನ್ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ ಈ ವರ್ಷದ ಆಗಸ್ಟ್ನಲ್ಲಿ 121 ಟನ್ ಆಮದು ಮಾಡಿಕೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಆಮದು ಮಾಡಿಕೊಳ್ಳುವ ಕಾರಣ ರುಪಾಯಿ ಮೌಲ್ಯದ ಮೇಲೂ ಪರಿಣಾಮ ಆಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನ ಇಳಿಕೆ, ಬೆಳ್ಳಿ ಏರಿಕೆ: ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ 71 ರೂ. ಇಳಿಕೆ ಕಂಡಿದ್ದು, 46,503 ರೂ. ಆಗಿದೆ. ಚಿನ್ನ ಪ್ರತಿ ಕೆಜಿಗೆ 263 ರೂ. ಏರಿಕೆ ಕಂಡಿದ್ದು, 64,168 ರೂ. ತಲುಪಿದೆ.
ಸಾರ್ವಕಾಲಿಕ ಎತ್ತರಕ್ಕೆ ಷೇರುಪೇಟೆ: ಸೆನ್ಸೆಕ್ಸ್ 166 ಅಂಕ ಏರಿಕೆ ಕಂಡಿದ್ದು, ಭಾರತೀಯ ಷೇರು ಸೂಚ್ಯಂಕ ಸಾರ್ವಕಾಲಿಕ ಎತ್ತರಕ್ಕೆ ತಲುಪಿದೆ. ಸೆನ್ಸೆಕ್ಸ್ 58,296ಕ್ಕೆ ಏರಿಕೆಯಾಗಿದ್ದರೆ, ನಿಫ್ಟಿ 54 ಅಂಕ ಏರಿಕೆ ಕಂಡು 17,377.80ಕ್ಕೆ ಹೆಚ್ಚಳವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಇಸ್ಪೋಸಿಸ್, ಎಚ್ಸಿಎಲ್ ಟೆಕ್, ಟೆಕ್ ಮಹಿಂದ್ರಾ, ಬಜಾಜ್ ಆಟೋ ಷೇರುಗಳಲ್ಲಿ ಏರಿಕೆ ಕಂಡುಬಂತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಖರೀದಿ ಮಾಡುತ್ತಿರುವುದು ಗಮನಾರ್ಹ.