ಅನುಕಂಪ ಆಧಾರದ ಸರ್ಕಾರಿ ಕೆಲಸ; ಗಳಿಸಿದ್ದು ಕೆಜಿಗಟ್ಟಲೇ ಚಿನ್ನ, ಬೆಳ್ಳಿ; ಕೋಟ್ಯಂತರ ಮೌಲ್ಯದ ಸ್ವತ್ತು ವಶ

police raid
Published on

ಹೈದರಾಬಾದ್​: ಕುದುರೆ, ಐಷಾರಾಮದ ವಸ್ತುಗಳು, ಭಾರಿ ಪ್ರಮಾಣದಲ್ಲಿ ಚಿನ್ನಾಭರಣ, ನಗದು, ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ ಇವೆಲ್ಲ ಪತ್ತೆಯಾಗಿದ್ದು ಕಾರು ಚಾಲಕನೊಬ್ಬನ ಮಾವನ ಮನೆಯಲ್ಲಿ....!

ಬಿಲ್​ಗಳನ್ನು ಪಾಸ್​ ಮಾಡಲು ಭಾರಿ ಲಂಚ ಪಡೆಯುತ್ತಿದ್ದ ಅಧಿಕಾರಿ ಅದರಿಂದ ಅಪಾರ ಸಂಪತ್ತು ಗಳಿಸಿದ್ದ. ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು.

84 ಕೆ.ಜಿ ಬೆಳ್ಳಿ, 2.4 ಕೆ.ಜಿ ಬಂಗಾರ, 15 ಲಕ್ಷ ರೂ. ನಗದು, 49 ಲಕ್ಷ ರೂ. ಮೊತ್ತದ ಠೇವಣಿ, 27 ಲಕ್ಷ ರೂ. ಮೊತ್ತದ ಸಾಲಪತ್ರಗಳು, ಹಾರ್ಲೆ ಡೇವಿಡ್​ಸನ್​ ಬೈಕ್​, ವಿವಿಧ ಐಷಾರಾಮದ ಸಾಮಗ್ರಿಗಳು, ಮೂರು ಪಿಸ್ತೂಲ್​ಗಳು, ಒಂದು ಏರ್​ಗನ್​ ಹಾಗೂ ಕುದುರೆಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅನಂತಪುರ ಜಿಲ್ಲೆಯಲ್ಲಿರುವ ಬಾಳಪ್ಪ ಎಂಬುವರ ಮನೆಯಿಂದ ಇದನ್ನೆಲ್ಲ ಸ್ವಾಧೀನಕ್ಕೆ ಪಡೆಯಲಾಗಿದೆ. ಈತ ಖಜಾನೆ ಇಲಾಖೆಯಲ್ಲಿ ಅಧಿಕಾರಿಯೊಬ್ಬರ ಕಾರು ಚಾಲಕನ ಮಾವನಾಗಿದ್ದಾನೆ. ಅಧಿಕಾರಿ ವಿರುದ್ಧ ಇನ್ನಷ್ಟೇ ದೂರು ದಾಖಲಾಗಬೇಕಾಗಿದೆ.

ಈ ಅಧಿಕಾರಿ ಕಾನ್​ಸ್ಟೆಬಲ್ ಆಗಿದ್ದ ತಂದೆಯ ಮರಣಾಂತರ ಅನುಕಂಪದ ಆಧಾರದಲ್ಲಿ 2006ರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. 14 ವರ್ಷಗಳಲ್ಲಿ ಈತ ಗಳಿಸಿದ ಸಂಪತ್ತು ಎಂಥವರನ್ನೂ ಬೆಚ್ಚಿ ಬೀಳಿಸುತ್ತದೆ.

ಕಳೆದ ವಾರವಷ್ಟೇ ತಹಶೀಲ್ದಾರ್​ವೊಬ್ಬ ಭೂವಿವಾದವನ್ನು ಬಗೆಹರಿಸಲು 1.10 ಕೋಟಿ ರೂ. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಈ ಹಿಂದೆಯೂ ಈತನ ವಿರುದ್ಧ ಅಕ್ರಮ ನಡೆಸಿದ ಆರೋಪಗಳಿದ್ದವು. ಹಿರಿಯ ಅಧಿಕಾರಿಗಳಿಗೆ ಭಾರಿ ಉಡುಗೊರೆಗಳನ್ನು ನೀಡುತ್ತಿದ್ದ ಈತ ಸುಲಭವಾಗಿ ಪಾರಾಗುತ್ತಿದ್ದ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net