ಅರಿಶಿನ ಬೆರೆಸಿದ ನೀರಲ್ಲಿ ಚಿನ್ನದ ಸರ ಹಾಕಿದರು... ಹತ್ತೇ ನಿಮಿಷದಲ್ಲಿ ಗೃಹಿಣಿಗೆ ಕಾದಿತ್ತು ಆಘಾತ

gold palish
Published on

ಬೆಂಗಳೂರು: ಇಲ್ಲೊಬ್ಬ ಗೃಹಿಣಿ ಮನೆಗೆ ಬಂದ ಅಪರಿಚಿತರ ಮಾತು ನಂಬಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಅವರ ಕೈಗೆ ಕೊಟ್ಟು ಇದೀಗ ಕಂಗಾಲಾಗಿದ್ದಾರೆ. ಆ ಗೃಹಿಣಿಯ ಕಣ್ಮುಂದೆಯೇ ನೀರಿಗೆ ಅರಿಶಿನ ಬೆರೆಸಿ ಅದಕ್ಕೆ ಚಿನ್ನದ ಸರ ಹಾಕಿದ್ದಾರೆ. ಆದರೆ ಕ್ಷಣಾರ್ಧದಲ್ಲೇ ಸರ ಮಾಯವಾಗಿದ್ದು, ಆ ಅಪರಿಚಿತರು ಅಲ್ಲಿಂದ ಎಸ್ಕೇಪ್​ ಆಗಿದ್ದಾರೆ.

ಹೌದು, ಚಿನ್ನ ಪಾಲಿಶ್ ಮಾಡುವ ನೆಪದಲ್ಲಿ ಶ್ರೀನಿವಾಸ್ ನಗರದ ಮನೆಯೊಂದಕ್ಕೆ ಬಂದ ದುಷ್ಕರ್ಮಿಗಳು, 'ನಿಮ್ನ ಚಿನ್ನವನ್ನು ಕಡಿಮೆ ಬೆಲೆಗೆ ಪಾಲಿಶ್ ಮಾಡಿ ಕೊಡ್ತೀವಿ' ಎಂದಿದ್ದಾರೆ. ಖದೀಮರ ಮಾತಿಗೆ ಮರುಳಾದ ಆ ಮನೆಯ ಗೃಹಿಣಿ ಉಷಾ, ಪಾಲಿಶ್​ ಮಾಡಲು 30 ಗ್ರಾಂ ತೂಕದ ಸರ ಕೊಟ್ಟಿದ್ದರು.

ನಂತರ ನೀರಿಗೆ ಅರಿಶಿನ ಪುಡಿ ಹಾಕಿ ಅದರಲ್ಲಿ ಚಿನ್ನದ ಸರ ಹಾಕಿದ ದುಷ್ಕರ್ಮಿಗಳು 10 ನಿಮಿಷ ಬಿಟ್ಟು ತೆಗೆಯಬೇಕು, ಸರ ಫಳಫಳ ಹೊಳೆಯುತ್ತದೆ ಎಂದ ಅವರು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಆ ನೀರಲ್ಲಿ ಕೈಹಾಕಿ ನೋಡಿದರೆ ಸರ ಇರಲಿಲ್ಲ.

ಚಿನ್ನ ಕಳೆದುಕೊಂಡ ಮಹಿಳೆಯು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರು ಚಿನ್ನಾಭರಣ ಎಗರಿಸಿ ಹೊರ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net