

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿ ಕ್ಯಾಬ್‌ಗೆ ಕಾಯುತ್ತಿದ್ದ ವ್ಯಕ್ತಿಯನ್ನು ತಬ್ಬಿಕೊಳ್ಳುವ ನೆಪದಲ್ಲಿ ತೃತೀಯ ಲಿಂಗಿ, 32 ಗ್ರಾಂ ಚಿನ್ನದ ಸರ ದೋಚಿದ್ದಾನೆ. ತಮಿಳುನಾಡಿನ ಚೆನ್ನೈ ಮೂಲದ 34 ವರ್ಷದ ವ್ಯಕ್ತಿ ಸರ ಕಳೆದುಕೊಂಡವರು.
ಮಾರ್ಕೆಟಿಂಗ್ ವಲಯದಲ್ಲಿ ಕೆಲಸ ಮಾಡುತ್ತಿದ್ದ ಚೆನ್ನೈ ಮೂಲದ ವ್ಯಕ್ತಿ, ಜ.8ಕ್ಕೆ ಬೆಂಗಳೂರಿಗೆ ಬಂದು ಎಂ.ಜಿ.ರಸ್ತೆಯಲ್ಲಿ ಬೆಳಗಿನ ಜಾವ 3 ಗಂಟೆಯಲ್ಲಿ ಸ್ನೇಹಿತನ ಜತೆಗೆ ಕ್ಯಾಬ್‌ಗಾಗಿ ಕಾಯುತ್ತಿದ್ದರು. ಆಗ ಅಲ್ಲಿಗೆ ಬಂದ ತೃತೀಯ ಲಿಂಗಿ, ದೂರುದಾರನೊಂದಿಗೆ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ. ಇದಕ್ಕೆ ಚೆನ್ನೈ ವ್ಯಕ್ತಿ ಒಪ್ಪದೆ ಇದ್ದಾಗ, ಮೂರ್ನಾಲ್ಕು ಬಾರಿ ತಬ್ಬಿಕೊಂಡು ಕತ್ತಿನಲ್ಲಿದ್ದ 1.64 ಲಕ್ಷ ರೂ. ಮೌಲ್ಯದ 32 ಗ್ರಾಂ ಚಿನ್ನದ ಸರ ಎಗರಿಸಿದ್ದಾನೆ.
ಅಲ್ಲಿಂದ ತೃತೀಯ ಲಿಂಗಿ ಹೋದ ಮೇಲೆ ಕತ್ತಿನಲ್ಲಿದ್ದ ಚಿನ್ನದ ಸರ ನೋಡಿಕೊಂಡಾಗ ಕಳವಾಗಿರುವುದು ಗೊತ್ತಾಗಿದೆ. ಅಕ್ಕಪಕ್ಕದ ರಸ್ತೆಯಲ್ಲಿ ಹುಡುಕಾಟ ನಡೆಸಿ ಕೊನೆಗೆ ಕಬ್ಬನ್ ಪಾರ್ಕ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.