

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಂಡ ಗೆಲುವಿಗೆ ಮಹತ್ವದ ಕೊಡುಗೆ ನೀಡಿವೆ ಎನ್ನಲಾದ ಐದು ಗ್ಯಾರಂಟಿಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಈಗಾಗಲೇ ಮೂರು ಭರವಸೆಗಳನ್ನು ಈಡೇರಿಸಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ವಾಗ್ದಾನ ಮಾಡಿದ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಇದರಲ್ಲೊಂದಿಷ್ಟು ಭರವಸೆಗಳನ್ನು ಅನುಷ್ಠಾನಗೊಳಿಸಿಲ್ಲ ಎಂಬ ತಕರಾರುಗಳು ಕೇಳಿಬರುತ್ತಿವೆ. ಐದು ಭರವಸೆಗಳ ಪೈಕಿ ಒಂದಾದ 200 ಯುನಿಟ್ ವಿದ್ಯುತ್ ಉಚಿತ ಪೂರೈಸುವ ಗೃಹ ಜ್ಯೋತಿ ಗ್ಯಾರಂಟಿ ಯೋಜನೆಯನ್ನು ಜುಲೈನಲ್ಲಿ ಆರಂಭಿಸಲಾಗಿದ್ದು, ಈ ಯೋಜನೆಯಲ್ಲಿ ಪೂರ್ತಿ 200 ಯುನಿಟ್ಗಳನ್ನು ಉಚಿತವಾಗಿ ಬಳಸಲು ಅವಕಾಶ ನೀಡದೆ ಷರತ್ತು ವಿಧಿಸಲು ಸರ್ಕಾರ ಮುಂದಾಗಿರುವುದು ವಿವೇಚನೆಯುಳ್ಳ ಸೂಕ್ತ ನಿರ್ಧಾರ ಎನ್ನಬಹುದಾಗಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಹಾಗೂ 10 ಕೆಜಿ ಉಚಿತ ಅಕ್ಕಿ ನೀಡುವ ಅನ್ನ ಭಾಗ್ಯ ಯೋಜನೆಗಳನ್ನು ತಾನು ವಾಗ್ದಾನ ನೀಡಿರುವಂತೆ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ನಿರುದ್ಯೋಗಿ ಡಿಪ್ಲೋಮಾ ಹಾಗೂ ಪದವೀಧರರಿಗೆ ನೆರವು ಒದಗಿಸುವ ಯುವ ನಿಧಿ ಯೋಜನೆಯಲ್ಲಿ, 2022-23ರಲ್ಲಿ ತೇರ್ಗಡೆ ಹೊಂದಿದ ಪದವೀಧರರಿಗೆ 24 ತಿಂಗಳವರೆಗೆ ಮಾಸಿಕ 3 ಸಾವಿರ ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ ನೆರವನ್ನು ನೀಡಲಾಗುತ್ತಿದೆ. 2022-23ರ ಅವಧಿಯವರಿಗೆ ಮಾತ್ರ ಸಹಾಯಧನವೇಕೆ? ಉಳಿದ ಅವಧಿಯಲ್ಲೂ ಸಾಕಷ್ಟು ನಿರುದ್ಯೋಗಿಗಳಿದ್ದು, ಅವರನ್ನೂ ಪರಿಗಣಿಸಬೇಕಿತ್ತು ಎಂಬ ಆಕ್ಷೇಪ ಈ ಯೋಜನೆಗೆ ವ್ಯಕ್ತವಾಗಿದೆ. ಇದೇ ರೀತಿ ಗೃಹ ಜ್ಯೋತಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ ಎಂಬ ತಕರಾರುಗಳಿವೆ. ಗೃಹ ಜ್ಯೋತಿ ಜಾರಿಯ ಅನ್ವಯ ಆಗಸ್ಟ್ನಲ್ಲಿ ಮೊದಲ ಬಿಲ್ ಬರಲಿದೆ. ಈ ಯೋಜನೆಗೆ ವಿಧಿಸಲಾಗಿರುವ ಷರತ್ತಿನ ಪ್ರಕಾರ ಕಳೆದ ಒಂದು ವರ್ಷದ ಸರಾಸರಿ ಬಳಕೆಯನ್ನು ಪರಿಗಣಿಸಲಾಗುತ್ತಿದೆ. ಈ ಸರಾಸರಿಗಿಂತ ಹೆಚ್ಚುವರಿಯಾಗಿ ಗರಿಷ್ಠ ಶೇಕಡಾ 10ರ ಮಿತಿಯೊಳಗೆ ವಿದ್ಯುತ್ ಬಳಸಿದ್ದರೆ ಫಲಾನುಭವಿಗಳು ಯಾವುದೇ ಬಿಲ್ ಶುಲ್ಕ ಪಾವತಿಸಬೇಕಾಗಿಲ್ಲ. ಈ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸಿದ್ದರೆ ಹೆಚ್ಚುವರಿಯಾಗಿ ಬಳಸಿರುವ ವಿದ್ಯುತ್ಗೆ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಈ ಷರತ್ತು ವಿಧಿಸಿಲ್ಲದಿದ್ದರೆ ರಾಜ್ಯದಲ್ಲಿ ತೀವ್ರ ಪ್ರಮಾಣದ ವಿದ್ಯುತ್ ಅಭಾವ ಸೃಷ್ಟಿಯಾಗುತ್ತಿತ್ತು. ಏಕೆಂದರೆ, ಈ ಹಿಂದೆ ಕಡಿಮೆ ವಿದ್ಯುತ್ ಬಳಸುತ್ತಿರುವವರು ಕೂಡ ಉಚಿತವಾಗಿ ಲಭಿಸುತ್ತದೆ ಎಂಬ ಕಾರಣಕ್ಕಾಗಿ 200 ಯುನಿಟ್ ವಿದ್ಯುತ್ ಬಳಸಿದ್ದರೆ ವಿದ್ಯುತ್ ಕ್ಷಾಮ ತಲೆದೋರುವ ಸಾಧ್ಯತೆ ಇತ್ತು. ಅನಗತ್ಯ ಹಾಗೂ ದುಂದು ಬಳಕೆಯಿಂದಾಗಿ ಸರ್ಕಾರದ ಮೇಲೆ ಇನ್ನಷ್ಟು ಹೊರೆಯೂ ಉಂಟಾಗುತ್ತಿತ್ತು.
ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅದರ ಬಿಸಿ ಆಗಸ್ಟ್ ತಿಂಗಳಿನಿಂದ ರಾಜ್ಯದ ಜನತೆಗೆ ತಟ್ಟುವುದು ನಿಶ್ಚಿತವಾಗಿದೆ. ವಿದ್ಯುತ್ ದರವನ್ನು ಯುನಿಟ್ಗೆ 65 ಪೈಸೆಯಷ್ಟು ಈಗಾಗಲೇ ಹೆಚ್ಚಿಸಲಾಗಿದೆ. ಮದ್ಯ ದರಗಳನ್ನು ಏರಿಸಲಾಗಿದೆ. ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಹೆಚ್ಚಿಸಲು ಉದ್ದೇಶಿಸಿರುವುದರಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೆಚ್ಚಳ ನಿಶ್ಚಿತವಾಗಿದೆ. ಕೆಲವೊಂದಿಷ್ಟು ವಾಹನಗಳ ತೆರಿಗೆ, ಜಲ್ಲಿಕಲ್ಲು, ಮರಳು ದರ ಆಗಸ್ಟ್ ನಿಂದ ಹೆಚ್ಚಾಗಲಿದೆ. ಹಾಲಿನ ದರವು ಲೀಟರ್ 3 ರೂಪಾಯಿ ಹೆಚ್ಚಾಗಲಿದೆ. ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ಪರದಾಡುತ್ತಿರುವ ರಾಜ್ಯದ ಜನತೆಯ ಮೇಲೆ ಇನ್ನಷ್ಟು ಹೊರೆಯಾಗದಂತೆ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ.