ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಸಾಧನೆ ಶೇ.38!; ಆರ್ಥಿಕ ವರ್ಷದಲ್ಲಿ ತೀವ್ರ ಕುಂಠಿತ, ಅನೇಕ ಯೋಜನೆಗಳಲ್ಲಿ ಶೂನ್ಯ

Centre Projects
Published on

ಬೆಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ನೆರವಿನಲ್ಲಿ ಜಾರಿಗೆ ಬರಬೇಕಾಗಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಪ್ರಸಕ್ತ ಹಣಕಾಸು ವರ್ಷದಲ್ಲಿ ತೀವ್ರ ಕುಂಠಿತವಾಗಿದೆ. ಒಟ್ಟಾರೆ 22 ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿವೆ. ಈ ಇಲಾಖೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಪ್ರಗತಿ ಶೇ.38.57ಕ್ಕೆ ಸೀಮಿತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಕಾಲಕ್ಕೆ ಅನುದಾನ ಬಿಡುಗಡೆಯಾಗದಿರುವ ಹಿನ್ನೆಲೆಯಲ್ಲಿ ಪ್ರಗತಿ ಕುಸಿದಿದೆ. ಕೆಲ ಯೋಜನೆಗಳಲ್ಲಿ ಪ್ರಗತಿ ಶೂನ್ಯವಾಗಿರುವುದು ಆತಂಕದ ಸಂಗತಿಯೂ ಆಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನಡೆಸಿದ ಮಾಸಿಕ ಕೆಡಿಪಿ ಸಭೆಯಲ್ಲಿಯೇ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆದಿದೆ. ಪ್ರಗತಿಯನ್ನು ಇನ್ನಷ್ಟು ಚುರುಕುಗೊಳಿಸುವಂತೆಯೂ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಯಾವ ಯೋಜನೆಗಳು: ಪ್ರಧಾನ ಮಂತ್ರಿ ಗ್ರಾಮ ಸಡಕ್, ಸ್ವಚ್ಛ ಭಾರತ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕುಟುಂಬ ಕಲ್ಯಾಣ, ಸಮಗ್ರ ಶಿಕ್ಷಣ ಕರ್ನಾಟಕ, ಮಧ್ಯಾಹ್ನದ ಬಿಸಿಯೂಟ, ಪೌಷ್ಟಿಕಾಂಶ ಕಾರ್ಯಕ್ರಮ, ಸಮಗ್ರ ಶಿಶು ಅಭಿವೃದ್ಧಿ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ನ್ಯಾಯಾಲಯ ಕಟ್ಟಡಗಳು, ರಾಷ್ಟ್ರೀಯ ಕೃಷಿ ವಿಕಾಸ, ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಗಳು ಪ್ರಮುಖವಾದ ಕೇಂದ್ರ ಪುರಸ್ಕೃತ ಯೋಜನೆಗಳಾಗಿವೆ.

ಅನುದಾನ-ಖರ್ಚು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಒಟ್ಟಾರೆ 38568.45 ಕೋಟಿ ರೂ.ಗಳನ್ನು ಈ ವರ್ಷ ವೆಚ್ಚ ಮಾಡಬೇಕಾಗಿದೆ. ಇದರಲ್ಲಿ ರಾಜ್ಯ ಸರ್ಕಾರ 15131.57 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 17720.43 ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಪ್ರಾಥಮಿಕ ಶಿಲ್ಕು 5716.44 ಕೋಟಿ ರೂ. ಇದೆ. ಈವರೆಗೂ 18087.43 ಕೋಟಿ ರೂ. ಬಿಡುಗಡೆ ಸಹ ಆಗಿದೆ. ಆದರೆ, ಅದರಲ್ಲಿ ವೆಚ್ಚ ಮಾಡಿರುವುದು 14874.34 ಕೋಟಿ ರೂ.ಗಳು.

ಯಾವ ಯೋಜನೆ ಶೂನ್ಯ?: ಕೃಷಿ ಇಲಾಖೆಯ ಮುಖ್ಯಮಂತ್ರಿ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಪ್ರಗತಿ ಶೂನ್ಯವಾಗಿದೆ. ಒಟ್ಟಾರೆ 291 ಕೋಟಿ ರೂ. ಯೋಜನೆ ಇದಾಗಿದೆ. 144 ಕೋಟಿ ರೂ. ಬಿಡುಗಡೆಯೂ ಆಗಿದೆ. ಆದರೆ ವೆಚ್ಚ ಮಾತ್ರ ಸೊನ್ನೆಯಾಗಿದೆ. ನಯಾ ಪೈಸೆ ಸಹ ಖರ್ಚಾಗಿಲ್ಲ.

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಆತಂಕ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅನುದಾನವೇ ಬಿಡುಗಡೆಯಾಗಿಲ್ಲ. ಎರಡು ಯೋಜನೆಗಳಿಗೆ ಕೇಂದ್ರದಿಂದ ತಲಾ 121.25 ಕೋಟಿ ರೂ.ಗಳ ಅನುದಾನ ನಿಗದಿಯಾಗಿದೆ. ರಾಜ್ಯ ಸರ್ಕಾರದ ಪಾಲು ನಿಗದಿಯೇ ಆಗಿಲ್ಲ. ಕೇಂದ್ರ ಸಹ ಹಣ ಬಿಡುಗಡೆಯೇ ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿ ವೇತನ ಸಿಕ್ಕುವುದೇ ಎಂಬ ಆತಂಕ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕಾಡಲಾರಂಭಿಸಿದೆ.

ನಿರೀಕ್ಷೆಯಷ್ಟಿಲ್ಲ ಸ್ವಚ್ಛಭಾರತ ಪ್ರಗತಿ

ಸ್ವಚ್ಛ ಭಾರತ ಪ್ರಧಾನಿ ಮೋದಿ ಕನಸಿನ ಯೋಜನೆ. ಈ ವರ್ಷಕ್ಕೆ ರಾಜ್ಯ ಸರ್ಕಾರ 166.40 ಕೋಟಿ ರೂ., ಕೇಂದ್ರ 249.60 ಕೋಟಿ ರೂ. ಉಳಿದಿರುವ ಮೊತ್ತ 680.23 ಕೋಟಿ ರೂ. ಸೇರಿ ಒಟ್ಟಾರೆ 1096.23 ಕೋಟಿ ರೂ.ಗಳನ್ನು ನಿಗದಿ ಮಾಡಲಾಗಿದೆ. ಆದರೆ, ಇದುವರೆವಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಯಾಪೈಸೆ ಬಿಡುಗಡೆಯಾಗಿಲ್ಲ. ಸರ್ಕಾರದಲ್ಲಿ ಉಳಿದಿರುವ ಹಣದಲ್ಲಿ 153 ಕೋಟಿ ರೂ. ವೆಚ್ಚ ಮಾಡಲಾಗಿದೆ. ಒಟ್ಟಾರೆ ಶೇ.14.04 ಖರ್ಚಾಗಿದೆ. ಶಾಲೆಗಳು ಇಲ್ಲದಿದ್ದರೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎಂಬ ಸೂಚನೆ ಇದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ 2046.97 ಕೋಟಿ ರೂ. ನಿಗದಿ ಮಾಡಿವೆ. 831.89 ಕೋಟಿ ರೂ. ಬಿಡುಗಡೆ ಸಹ ಆಗಿದೆ. ಆದರೆ ಖರ್ಚಾಗಿರುವುದು 74.72 ಕೋಟಿ ರೂ.ಗಳಷ್ಟೇ. ಪ್ರಗತಿ ಶೇ.3.65. ಗ್ರಾಮೀಣ ವಸತಿಯಲ್ಲಿ ಶೇ.5.58 ಮಾತ್ರ ಪ್ರಗತಿಯಾಗಿದ್ದರೆ, ನಗರ ವಸತಿಯಲ್ಲಿ ಶೇ.41.65 ಉತ್ತಮ ಪ್ರಗತಿ ಸಾಧ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಲ್ಲಿ ಶೇ.40.53, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಶೇ.41 ಸಾಧನೆಯಾಗಿದೆ. ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಯ ಪ್ರಗತಿ ಸಹ ಶೂನ್ಯ ಮಟ್ಟದಲ್ಲಿಯೇ ಇದೆ. ವಿಪತ್ತು ನಿರ್ವಹಣೆಯಲ್ಲಿ ಮಾತ್ರ ಅತ್ಯಂತ ಹೆಚ್ಚಿನ ಪ್ರಗತಿ ಸಾಧ್ಯವಾಗಿದೆ. ಶೇ. 74.47 ಸಾಧನೆ ಮಾಡಲಾಗಿದ್ದು, ಪ್ರವಾಹ ಹೆಚ್ಚಿದ ಕಾರಣದಿಂದ ಪ್ರಗತಿ ಸಾಧ್ಯವಾಗಿದೆ. ಮಾರ್ಚ್ ಅಂತ್ಯದೊಳಗೆ ಇನ್ನಷ್ಟು ಪ್ರಗತಿ ಸಾಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆಂದು ಸರ್ಕಾರದ ಉನ್ನತ ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net