

ಭಗವಂತನ ಸೃಷ್ಟಿಯ ವೈಚಿತ್ರ್ಯಕ್ಕೆ ಇನ್ನೊಂದು ಉದಾಹರಣೆ ನವಿಲು. ಮೇಘಗರ್ಜಿಸುವ ಮುಂಗಾರು ಮಳೆಯ ಸಂದರ್ಭದಲ್ಲಿ ಗಂಡು ನವಿಲು ತನ್ನ ಗರಿಗಳನ್ನು ಕೆದರಿಕೊಂಡು ಕುಣಿಯುತ್ತದೆ. ಮನದಣಿ ಯುವಂತೆ ಕುಣಿದು ಕುಪ್ಪಳಿಸಿದಾಗ ಅದರ ಕಣ್ಣುಗಳಿಂದ ನೀರು ಸುರಿಯುತ್ತದೆ. ಆಗ ಹೆಣ್ಣು ನವಿಲು ಬಂದು ಆ ಕಣ್ಣೀರು ಕುಡಿಯುತ್ತದೆ. ನಂತರ ಅದು ಗರ್ಭಧರಿಸುತ್ತದೆ. ಇವೆಲ್ಲ ಅಚ್ಚರಿಗಳಲ್ಲವೇ? ಹೀಗೆ ಒಂದೊಂದು ಪಕ್ಷಿ, ಪ್ರಾಣಿ, ಪಶು, ಮನುಷ್ಯರಲ್ಲಿ ಭಗವಂತ ವೈವಿದ್ಯವನ್ನು ಇರಿಸಿದ್ದಾನೆ.
ವೇಳೆಯನ್ನು ತೀಳಿಯುವ ಗುಣ ಕೋಳಿಯಲ್ಲಿ ಇದೆ. ವಾಯುವನ್ನೇ ಆಹಾರವನ್ನಾಗಿ ಸೇವಿಸುವ ಗುಣ ಸರ್ಪಗಳಲ್ಲಿ ಇದೆ. ಸಿಹಿಯ ಗುಣವನ್ನು ಗುರ್ತಿಸುವ ವಿಶೇಷ ಗುಣ ಇರುವೆಯಲ್ಲಿ ಇದೆ. ಇರುವೆಯಲ್ಲಿರುವ ಈ ಗುಣವನ್ನು ಬದಲಾಯಿಸಬೇಕೆಂದು ಮನೆಯಲ್ಲಿರುವ ಸಕ್ಕರೆ ಡಬ್ಬಿಯ ಮೇಲೆ ಖಾರದಪುಡಿ ಚೆಲ್ಲಿದರೂ ಅವು ಸಾಲುಗಟ್ಟುತ್ತವೆ. ಅದರ ಸಹಜ ಸ್ವಭಾವ, ಭಗವಂತ ನಿರ್ವಿುತ ಸ್ವಭಾವವನ್ನು ಬದಲಾಯಿಸಲಿಕ್ಕೆ ಸಾಧ್ಯವೇ? ಹೀಗೆ ಪ್ರತಿಯೊಂದು ಜೀವರಾಶಿಗಳಲ್ಲಿ ಒಂದೊಂದು ವೈವಿಧ್ಯವನ್ನು ತುಂಬಿ ಸೃಷ್ಟಿಸಿದ ಆ ಪರಮಾತ್ಮನ ಲೀಲೆ ಅದ್ಬುತ. ಪ್ರತಿಯೊಂದರೊಳಗೂ ಬಣ್ಣ, ಪ್ರಕೃತಿ, ಸ್ವಭಾವ, ವರ್ತನೆ, ಆಹಾರ-ವಿಹಾರ, ಕರ್ತವ್ಯ, ಕರ್ಮ, ಮನ, ಬುದ್ಧಿ ಮೊದಲಾದವುಗಳನ್ನು ಸೃಷ್ಟಿಸಿದ್ದಾನೆ. ಇದುವೇ ಅವನ ಲೀಲಾವಿನೋದ. ಯಾವ್ಯಾವ ಋತುಮಾನಕ್ಕೆ ಅನುಗುಣವಾಗಿ, ಹೂ, ಹಣ್ಣು, ಕಾಯಿಗಳು, ಸಸ್ಯಾದಿಗಳು, ತರು, ಲತೆಗಳು, ಆಹಾರ ಧಾನ್ಯಗಳು ಎಲ್ಲಿ ಹೇಗೆ ಯಾವ್ಯಾವದು ಬೆಳೆಯಬೇಕೋ ಅದಕ್ಕೆ ಪೂರಕವಾದ ಭೂಮಿಯ ಮಣ್ಣನ್ನು ಮೊದಲೇ ಸಿದ್ಧಗೊಳಿಸಿದ್ದಾನೆ. ಒಂದೇ ನೀರು ಯಾವ್ಯಾವ ರಸವಾಗಿ, ಪರಿಣಮಿಸಬೇಕೋ ಅದನ್ನೂ ನಿರ್ವಿುಸಿದ್ದಾನೆ.
ಆದ್ದರಿಂದಲೇ ಅಕ್ಕಹೇಳಿದ್ದು: ಈಳೆ-ನಿಂಬೆ-ಮಾವು-ಮಾದಲಕ್ಕೆ ಹುಳಿನೀರೆರೆದವರಾರಯ್ಯ?/ ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?/ ....... ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!/ ........ ಎನ್ನ ದೇವ ಚನ್ನಮಲ್ಲಕಾರ್ಜುನಯ್ಯನು ಹಲವು ಜಗಂಗಳ ಕೂಡಿಕೊಂಡ್ಡಿದ್ದರೇನು? ತನ್ನ ಪರಿ ಬೇರೆ! ಇದುವೇ ಆ ಪರಮಾತ್ಮನ ಲೀಲಾವಸ್ಥೆ.