

ಸಾಗರ: ವಿಜಯದಶಮಿ ಒಳ್ಳೆಯದರ ಸಂಕೇತ. ಧರ್ಮ ಸಂರಕ್ಷಣೆ ಮತ್ತು ದುಷ್ಟಶಕ್ತಿಯ ನಿವಾರಣೆಯ ಧ್ಯೋತಕವಾಗಿ ವಿಜಯದಶಮಿ ಆಚರಣೆ ನಮ್ಮ ಪೂರ್ವಜರ ಕಾಲದಿಂದ ನಡೆದುಕೊಂಡು ಬರುತ್ತಿದೆ ಎಂದು ಬಳಸಗೋಡು ಮಠದ ಶ್ರೀ ವಿನಾಯಕ ದೇವರು ತಿಳಿಸಿದರು.
ಸಾಗರದ ಗಂಗಾಪರಮೇಶ್ವರಿ ರಸ್ತೆಯ ಕುಕ್ವಾಡದಾಂಬಾ ಭವಾನಿ ದೇವಸ್ಥಾನದಲ್ಲಿ ಶನಿವಾರ ಜಂಗಮ ಮಹಿಳಾ ಸಮಾಜದಿಂದ ಆಯೋಜಿಸಿದ್ದ ವಿಜಯದಶಮಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಾಣ ಕಾಲದಿಂದಲೂ ಎಲ್ಲ ಸಂದರ್ಭದಲ್ಲಿ ಧರ್ಮವೇ ಗೆದ್ದಿದೆ. ಧರ್ಮದ ಎದುರು ಅಧರ್ಮದ ಗೆಲುವು ತಾತ್ಕಾಲಿಕ. ಧರ್ಮ ಸಂಸ್ಥಾಪನಾರ್ಥವಾಗಿ ದೇವಿ ಜನ್ಮವೆತ್ತಿದ ಅನೇಕ ಕಥೆಗಳು ನಮಗೆ ಪ್ರೇರಣೆಯಾಗಬೇಕು. ನವರಾತ್ರಿ ಸಂದರ್ಭದಲ್ಲಿ ಪುಣ್ಯಕಥೆಗಳ ಶ್ರವಣದಿಂದ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶಿಥಿಲವಾಗಿದ್ದ ಅಂಬಾಭವಾನಿ ದೇವಸ್ಥಾನ ಮರು ನಿರ್ಮಾಣ ಕಾರ್ಯ ಹಂತವಾಗಿ ನಡೆಯುತ್ತಿದೆ. ಇಂತಹ ಧರ್ಮಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ. ಜಂಗಮ ಸಮಾಜದ ಮಹಿಳೆಯರು ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ಸಾಂಗವಾಗಿ ನೆರವೇರಲು ಪ್ರಯತ್ತಿಸುತ್ತಾರೆ ಎಂದು ತಿಳಿಸಿದರು.
ಜಂಗಮ ಮಹಿಳಾ ಸಮಾಜದ ಅರುಣಾ ಹಿರೇಮಠ, ಉಷಾ ಗಿರಿಧರ್, ವಿಮಲಾ, ದಾಕ್ಷಾಯಿಣಿ, ಪ್ರಿಯಾ ರವಿಸ್ವಾಮಿ ಇತರರಿದ್ದರು.