ಭಗವಂತ ಒಲಿಯುವುದು ಕಾಣಿಕೆ-ತೋರ್ಪಡಿಕೆಗಲ್ಲ, ಭಕ್ತಿಗೆ

ವಿಜಯವಾಣಿ
Published on
ಸರಿಯಾದ ಅರ್ಥದಲ್ಲಿ ಭಕ್ತಿ ಎಂಬುದನ್ನು ಮೊದಲು ಅರಿಯಬೇಕು. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೂವು, ಹಣ್ಣು, ಕಾಣಿಕೆ ಇತ್ಯಾದಿಗಳನ್ನು ಸಮರ್ಪಿಸಿದಾಕ್ಷಣ ಭಕ್ತ ಎಂದೆನಿಸಿಕೊಂಡರೆ, ಮತ್ತೆ ಕೆಲವರು ಭಗವಂತನಿಗೆ ಅಂದರೆ ದೇವಾಲಯಗಳಿಗೆ ವಜ್ರದ ಕಿರೀಟ, ಚಿನ್ನದ ಕವಚ ಇತ್ಯಾದಿಗಳನ್ನು ಅರ್ಪಿಸಿದಾಕ್ಷಣ ಮಹಾನ್ ಭಕ್ತರು ಎಂದೆನಿಸಿ ಕೊಂಡುಬಿಡುತ್ತಾರೆ.

ಇನ್ನೂ ಕೆಲವರಿದ್ದಾರೆ, ಅವರಂತೂ ದಿನದ ಪೂಜೆಯನ್ನು ತಮ್ಮ ಕಾಣಿಕೆಯಿಂದಲೇ ನಡೆಸಬೇಕೆಂದು ಕನಿಷ್ಠ ಹಣವನ್ನು ನೀಡಿ ದೇವಾಲಯಕ್ಕೆ ಆ ದಿನ ಭೇಟಿ ನೀಡಿ ದೇವರನ್ನು ಕಾಣುವ ಬದಲು ತಮ್ಮ ಹೆಸರು, ಗೋತ್ರ, ಇತ್ಯಾದಿ ಸರಿಯಾಗಿ ಬರೆದಿರುವರೇ ಎಂದು ಪರೀಕ್ಷಿಸಿ ನಂತರ ದೇವರ ದರ್ಶನಕ್ಕೆ ಸಿದ್ದರಾಗುವವರೂ ಇದ್ದಾರೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಹುಲುಮಾನವ ನಡೆಸುವುದು ತಮ್ಮ ಹೆಸರು ದೇವಾಲಯದಲ್ಲಿ ಗೋಚರಿಸಲಿ ಎಂಬ ಏಕೈಕ ಉದ್ದೇಶದಿಂದ. ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಜೀವನದಲ್ಲಿ ಒಂದು ಸ್ವಾರಸ್ಯಕರವಾದ ಘಟನೆ ನಡೆಯುತ್ತದೆ.

ಅದೇನೆಂದರೆ, ದಕ್ಷಿಣೇಶ್ವರದ ರಾಧಾಕಾಂತ ಮಂದಿರದಲ್ಲಿ ಕಳ್ಳರು ನುಗ್ಗಿ ವಡವೆ, ವಸ್ತ್ರಗಳನ್ನು ದೋಚಿರುತ್ತಾರೆ. ಬೆಳಿಗ್ಗೆ ದೇವಾಲಯದ ಮಾಲೀಕರಾಗಿದ್ದ ಹಾಗೂ ರಾಣಿ ರಾಸಮಣಿದೇವಿಯ ಅಳಿಯನಾಗಿದ್ದ ಮಥುರನಾಥ ವಿಶ್ವಾಸ್ ಈ ಕಳ್ಳತನದ ಬಗ್ಗೆ ತಿಳಿದು ಧಾವಿಸಿ ಬಂದು, ಆ ರಾಧಾಕಾಂತನಿಗೆ ಹೇಳುತ್ತಾನೆ: ‘ಅಲಂಕರಿಸಿದ್ದ ಆಭರಣಗಳನ್ನು ಕಳ್ಳರು ದೋಚಿದ್ದಾರೆ! ಎಂಥಾ ದೇವರಯ್ಯ, ಆಭರಣಗಳನ್ನು ಕಾಪಾಡಿಕೊಳ್ಳಲಾಗಲಿಲ್ಲ ನಿನ್ನಿಂದ’ ಎಂದು ಮಾರ್ವಿುಕವಾಗಿ ನುಡಿಯುತ್ತಾನೆ.

ಆಗ ಅಲ್ಲಿಯೇ ಇದ್ದ ಪರಮಹಂಸರು ‘ಎಂಥ ಮೂರ್ಖ ತನದ ಮಾತನಾಡುತ್ತಿರುವೆ! ಛೇ, ಆತನ ಪಾದಾರವಿಂದಗಳಿಗೆ ಸಾಕ್ಷಾತ್ ಲಕ್ಷ್ಮೀದೇವಿಯೇ ಸೇವೆ ಸಲ್ಲಿಸುವಾಗ ತೃಣಕ್ಕಿಂತಲೂ ಕಡೆಯಾದ ನಿನ್ನ ಆಭರಣಗಳು ಲೆಕ್ಕವೇ?’ ಎಂದು ತಿಳಿಹೇಳುತ್ತಾರೆ. ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳಬೇಕಾದರೆ ಆಹೇತುಕ ಭಕ್ತಿ ಬೇಕು. ಈ ನಿಟ್ಟಿನಲ್ಲಿ ಪರಮಹಂಸರು, ‘ಯಾರು ಬೇಕಾದರೂ ಭಗವತ್ ಸಾಕ್ಷಾತ್ಕಾರವನ್ನು ಪಡೆಯಬಹುದು, ಆದರೆ ಅವರ ಭಕ್ತಿ ಶುದ್ಧ, ರಾಗ ಹಾಗೂ ಆಹೇತುಕ ಭಕ್ತಿಯಾಗಿರಬೇಕು’ ಎನ್ನುತ್ತಾರೆ.

ಒಮ್ಮೆ ತಮ್ಮ ಸತ್ಸಂಗದಲ್ಲಿ ತಮ್ಮಲ್ಲಿಗೆ ಬಂದಿದ್ದ ಭಕ್ತರನ್ನುದ್ದೇಶಿಸಿ ಈ ರೀತಿ ಉಪದೇಶಿಸುತ್ತಾರೆ:‘ನಿಮ್ಮ ತತ್ವಶಾಸ್ತ್ರ ಕೇವಲ ಊಹಾಪೋಹದಿಂದ ತುಂಬಿದೆ. ಹಾಗೆ ಮಾಡುವುದರಿಂದ ಭಗವಂತನ ಸಾಕ್ಷಾತ್ಕಾರ ಪಡೆಯಲಾಗುವುದಿಲ್ಲ. ರಾಗಾಭಕ್ತಿಯಿರಬೇಕು. ರಾಗಾಭಕ್ತಿ ಎಂದರೆ ಅನುರಾಗ ಸಹಿತವಾದ ಭಕ್ತಿ. ಅದು ಉಂಟಾಯಿತು ಎಂದರೆ ಭಗವಂತನ ಹೃದಯ ಸುಮ್ಮನೆ ಇರಲಾರದು. ರಾಗಾ ಭಕ್ತಿ ಎಂಬುದು ಶುದ್ಧ ಭಕ್ತಿ, ಆಹೇತುಕ ಭಕ್ತಿ, ಉದಾಹರಣೆಗೆ ಪ್ರಹ್ಲಾದನದು ಎಂದು ವಿವರಿಸುತ್ತಾರೆ ರಾಮಕೃಷ್ಣರು. ಶುದ್ಧ ಭಕ್ತಿ ಒಮ್ಮೆಗೇ ಬಂತೆಂದರೆ ನಂತರ ಎಲ್ಲವನ್ನೂ ತ್ಯಜಿಸಿ ಭಗವದ್ದರ್ಶನಕ್ಕೆ ಹಾತೊರೆಯುವುದೇ ಆಹೇತುಕ ಭಕ್ತಿ.

ನಾರದ ಭಕ್ತಿಸೂತ್ರದಲ್ಲಿ ಆಹೇತುಕ ಭಕ್ತಿಯ ನಿಖರವಾದ ಅರ್ಥವನ್ನು ತಿಳಿಯಬಹುದಾಗಿದೆ. ತಸ್ಮಿನ್ ಪರಮ ಪ್ರೇಮ ರೂಪಾ - ನಾ.ಭ.ಸೂ-2. ಭಕ್ತಿಗೆ ಅರ್ಥವನ್ನು ನೀಡುವ ಈ ಸೂತ್ರದಲ್ಲಿ ಪರಮ ಪ್ರೇಮ ಎಂಬ ಅಂಶವನ್ನು ವಿವರಿಸಲಾಗುತ್ತದೆ. ಕೇವಲ ಪ್ರೀತಿ, ಪ್ರೇಮ ಎಂಬ ಮರೀಚಿಕೆಯಲ್ಲ, ಬದಲಾಗಿ ಭಗವಂತನಲ್ಲಿ ಸಂಪೂರ್ಣ ಶುದ್ಧವಾದ, ಆಳವಾದ, ನಿಸ್ವಾರ್ಥತೆಯಿಂದ ಕೂಡಿರುವ ಪ್ರೀತಿಯೇ ಆಹೇತುಕ ಭಕ್ತಿ.

ಈ ವಿಚಾರದ ಬಗ್ಗೆ ರಾಮಕೃಷ್ಣರು ಹೀಗೆ ಬೋಧಿಸಿದ್ದಾರೆ: ನೀವು ಪ್ರೇಮ, ಪ್ರೇಮ ಎನ್ನುತ್ತಲೇ ಇರುತ್ತೀರಿ. ಅದೇನು ಮೂರು ಕಾಸಿಗೆ ಸಿಗುವಂಥದ್ದೇ? ಶ್ರೀ ಚೈತನ್ಯದೇವನಲ್ಲಿ ಪ್ರೇಮ ಉಂಟಾಗಿತ್ತು. ಅದಕ್ಕೆ ಎರಡು ವಿಶೇಷ ಗುಣಗಳಿವೆ.

ಮೊದಲನೆಯದು ಈ ಜಗತ್ತನ್ನು ಮರೆಯುವಂತೆ ಮಾಡುತ್ತದೆ. ಭಗವಂತನನ್ನು ಕಂಡರೆ ಬಹಳ ಪ್ರೀತಿ. ಭಕ್ತ ಬಾಹ್ಯ ಜ್ಞಾನ ಶೂನ್ಯನಾಗಿ ಬಿಡುತ್ತಾನೆ. ಶ್ರೀಚೈತನ್ಯ ಒಮ್ಮೆ ವನವನ್ನು ನೋಡಿ ಅದೇ ಬೃಂದಾವನ ಎಂದು ಭಾವಿಸಿದ, ಸಮುದ್ರವನ್ನು ನೋಡಿ ಅದೇ ಯಮುನೆ ಎಂದು ಭಾವಿಸಿದ. ಎರಡನೆಯದು ಸ್ವಂತ ದೇಹ, ಅದರ ಮೇಲೂ ಮಮತೆ ಇರುವುದಿಲ್ಲ. ದೇಹಾತ್ಮ ಬುದ್ಧಿ ಆತನನ್ನು ಒಮ್ಮೆಗೇ ಬಿಟ್ಟು ತೊಲಗಿ ಹೋಗಿಬಿಡುತ್ತದೆ ಎಂದು ಭಗವತ್ಪ್ರೇಮದ ಬಗ್ಗೆ ವಿವರಿಸುತ್ತಾರೆ.

ನಿಜವಾದ ಭಕ್ತ ಯಾವುದೇ ಬಾಹ್ಯಾಡಂಬರಕ್ಕೆ ಮನಸ್ಸು ನೀಡದೆ ಕೇವಲ ಭಗವತ್ಪ್ರೇಮದಲ್ಲಿ ಮುಳುಗಿರುತ್ತಾನೆ. ಪ್ರಾಪಂಚಿಕತೆಯ ಲವಶೇಷವೂ ಅವನಿಗೆ ರುಚಿಸುವುದಿಲ್ಲ. ಇದೇ ನಿಜವಾದ ಅರ್ಥದಲ್ಲಿ ಭಗವತ್ಪ್ರೇಮ ರಾಗಾ ಭಕ್ತಿ, ಆಹೇತುಕ ಭಕ್ತಿ. ರಾಮಕೃಷ್ಣರ ಪ್ರಕಾರ ಭಗವಂತ ಹೃದಯ ನೋಡುತ್ತಿದ್ದಾನೆಯೇ ವಿನಃ ಯಾರ್ಯಾರು ಏನೇನು ಕಾರ್ಯದಲ್ಲಿ ನಿರತರಾಗಿದ್ದಾರೆ ಎಂಬುದನ್ನು ನೋಡುವುದಿಲ್ಲ. ಜನಾರ್ದನ ಭಾವಗ್ರಾಹಿ ಎಂದು ಬೋಧಿಸುತ್ತಾರೆ. ಇದೇ ನಿಜ ಅರ್ಥದಲ್ಲಿ ಭಕ್ತ ಎಂದೆನಿಸಿಕೊಳ್ಳುವುದು. ಕೇವಲ ಕಾಣಿಕೆ, ತೋರ್ಪಡಿಕೆಗಳಿಂದಲ್ಲ, ಬದಲಾಗಿ ಆಹೇತುಕ ಭಕ್ತಿಯಿಂದ ಭಗವಂತನನ್ನು ಆರಾಧಿಸುವವನೇ ನಿಜವಾದ ಅರ್ಥದಲ್ಲಿ ಭಕ್ತ.

(ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು, ಪ್ರತಿಕ್ರಿಯಿಸಿ: vvsudina@gmail.com, swajapa@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net