

ರಿಪ್ಪನ್‌ಪೇಟೆ: ದಶಧರ್ಮಗಳಲ್ಲಿ 9ನೇಯ ಯಾವುದೂ ನನ್ನದಲ್ಲವೆಂಬ ನಿಸ್ವಾರ್ಥ ಧರ್ಮವು ಜನರಿಗೆ ಅಂತರಂಗ-ಬಹಿರಂಗವಾಗಿ ಅರಿವಾದಾಗ ಸಾತ್ವಿಕ ಜೀವನ ಸಾಧನೆಯ ಗುರಿ ತಲುಪುವುದು ನಿಶ್ಚಿತ ಎಂದು ಹೊಂಬುಜ ಜೈನಮಠದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶ್ರೀ ಮಠದಲ್ಲಿ ನೆರವೇರುತ್ತಿರುವ ದಶಲಕ್ಷಣ ಮಹಾಪರ್ವದ 9ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಸ್ತು, ಸಂಪತ್ತು, ಸವಲತ್ತುಗಳನ್ನು ಇತಿಮಿತಿಯಲ್ಲಿ ಬಳಸಬೇಕಿದೆ ಎಂಬ ಸೂಕ್ಷ್ಮ ಧರ್ಮ ಸಂದೇಶವು ನಿಸ್ವಾರ್ಥ ಧರ್ಮಪಾಲನೆಯ ಸಾರವಾಗಿದೆ. ಸನ್ನಿವೇಶಗಳಿಗೆ ತಕ್ಕಂತೆ ಸರಳ, ಸುಂದರ ಜೀವನಕ್ಕಾಗಿ ಗೃಹಸ್ಥರು ಸಂಗ್ರಹಿಸುವ, ಧಾರಣೆ ಮಾಡುವ ಬದಲಾಗಿ ಧರ್ಮ ಪಥದ ಸಾತ್ವಿಕ ತತ್ವವು ಮಾನಸಿಕ, ಶಾರೀರಿಕ ಓಜಸ್ಸನ್ನು ವೃದ್ಧಿಸುತ್ತದೆ ಎಂದರು.
ಆರ್ಯಿಕ ಶಿವಮತಿ ಮಾತಾಜಿ ಉಪಸ್ಥಿತರಿದ್ದರು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಕ್ಷೇತ್ರಪಾಲಕ ಸನ್ನಿಧಿಯಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು.