ಬೇಗ ಬಂದು ಬೇಗನೆ ಹೋದ ಎಕ್ಸ್​ಪ್ರೆಸ್​​ ರೈಲು: ನಿಗದಿತ ಸಮಯಕ್ಕೆ ಬಂದ ಪ್ರಯಾಣಿಕರು ನಿಲ್ದಾಣದಲ್ಲಿ ಟ್ರೈನ್​ ಕಾಣದೇ ಕಂಗಾಲು

goa expres
Published on

ನಾಸಿಕ್​​: ಎಕ್ಸ್​​ಪ್ರೆಸ್​​ ರೈಲೊಂದು ನಿಗದಿತ ಸಮಯಕ್ಕಿಂತ ರೈಲು ನಿಲ್ದಾಣಕ್ಕೆ ಬೇಗನೆ ಬಂದು ಬೇಗನೆ ಹೋಗಿದ್ದರಿಂದ ಪ್ರಯಾಣಿಕರು ಆಘಾತಕ್ಕೊಳಗಾಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ನಾಸಿಕ್​ನ ಮನ್ಮಾಡ್​ ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ಎರಡು ಎಫ್‌ಐಆರ್ ರದ್ದುಗೊಳಿಸಿ 400 ಮರ ನೆಡಲು ಸೂಚನೆ ನೀಡಿದ ಹೈಕೋರ್ಟ್

ದೆಹಲಿಗೆ ಹೋಗುವ ವಾಸ್ಕೋಡಗಾಮಾ-ಹಜರತ್ ನಿಜಾಮುದ್ದೀನ್ ಗೋವಾ ಎಕ್ಸ್‌ಪ್ರೆಸ್​​ನ ನಿಗದಿತ ಆಗಮನದ ಸಮಯ ಬೆಳಿಗ್ಗೆ 10.35 ಇದ್ದು, ರೂಟ್​​ ಬದಲಿಸಿದ ಕಾರಣ ಆ ಟ್ರೈನ್​​ ಗುರುವಾರ ಬೆಳಿಗ್ಗೆ 9.05ಕ್ಕೆ ಮನ್ಮಾಡ್ ಜಂಕ್ಷನ್‌ಗೆ ತಲುಪಿ, ಮತ್ತೆ ಐದೇ ನಿಮಿಷದಲ್ಲಿ ಆ ನಿಲ್ದಾಣದಿಂದ ಹೊರಟು ಬಿಟ್ಟಿದೆ. ಆದರೆ ದೆಹಲಿಯತ್ತ ಹೊರಟಿದ್ದ ಈ ರೈಲು ಇದೇ ನಿಲ್ದಾಣದಲ್ಲಿ 45 ಪ್ರಯಾಣಿಕರನ್ನು ಹೊತ್ತೊಯ್ಯಬೇಕಾಗಿತ್ತು. ಇನ್ನೊಂದೆಡೆ ಪ್ರಯಾಣಿಕರು, ತಮ್ಮ ರೈಲು 10.35ಕ್ಕೆ ಎಂದು ಕೊಂಡು ಸುಮಾರು 10 ಗಂಟೆಗೆ ನಿಲ್ದಾಣವನ್ನು ತಲುಪಿ ತಮ್ಮ ರೈಲಿನ ಬಗ್ಗೆ ವಿಚಾರಿಸಿದ್ದಾರೆ. ರೈಲು ಅದಾಗಲೇ ಹೋಗಿರುವ ಸುದ್ದಿ ಕೇಳಿ, ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಅಲ್ಲದೇ, ತಮಗೆ ಕೂಡಲೇ ಪರ್ಯಾಯವಾಗಿ ಮತ್ತೊಂದು ರೈಲು ವ್ಯವಸ್ಥೆ ಮಾಡಬೇಕು ಎಂದು ನಿಲ್ದಾಣ ವ್ಯವಸ್ಥಾಪಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ಅಧಿಕಾರಿಗಳು ಅವರಿಗೆ ಗೀತಾಂಜಲಿ ಎಕ್ಸ್‌ಪ್ರೆಸ್‌ಗೆ ಹತ್ತಿಸಿದ್ದು, ಪ್ರಯಾಣಿಕರು ಜಲಗಾಂವ್‌ಗೆ ತಲುಪಿ ಅಲ್ಲಿಂದ ತಾವು ಪ್ರಯಾಣಿಸ ಬೇಕಾಗಿದ್ದ ಗೋವಾ ಎಕ್ಸ್‌ಪ್ರೆಸ್​​ನ​​ ಮೂಲಕ ಮುಂದೆ ಸಾಗಿದ್ದಾರೆ. ಈ ಪ್ರಯಾಣಿಕರು ಬರುವ ತನಕ ಗೋವಾ ಎಕ್ಸ್​​ಪ್ರೆಸ್​​ನ್ನು ಜಲಗಾಂವ್​​ಗಲ್ಲಿ ತಡೆಹಿಡಿಯಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net