

ಮುಜಾಫರ್‌ನಗರ: ಮಹಿಳೆಯ ಗ್ಯಾಂಗ್ ಕಟ್ಟಿಕೊಂಡು ಪತಿಯ ಎರಡನೇ ಪತ್ನಿಗೆ ಮೊದಲ ಪತ್ನಿಯು ಥಳಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ.
ಥಳಿತಕ್ಕೆ ಒಳಗಾದ ಮಹಿಳೆಯನ್ನು ಫರಾ ಅಂಜುಮ್ ಎಂದು ಗುರುತಿಸಲಾಗಿದ್ದು, ಈಕೆ ಖಾಸಿಂ ಅಲಿ ಎಂಬ ವೈದ್ಯನ ಎರಡನೇ ಪತ್ನಿಯಾಗಿದ್ದಾಳೆ. ಈತ ಈ ಹಿಂದೆ ಆತ ಆಯೇಷಾ ಎಂಬ ಮಹಿಳೆಯನ್ನೂ ಮದುವೆಯಾಗಿದ್ದ. ಫರಾ ಬುಧವಾರದಂದು ಖಾಸಿಮ್‌ನ ಕ್ಲಿನಿಕ್‌ಗೆ ಭೇಟಿ ನೀಡಿದ್ದಳು. ಆದರೆ, ಆಕೆಯನ್ನು ನೋಡಿದ ಆತ ಸ್ಥಳದಿಂದ ಪರಾರಿಯಾಗಿದ್ದ. ನಂತರ ಆತನಿಗಾಗಿ ಆಕೆ ಆಸ್ಪತ್ರೆಯಲ್ಲೇ ಕಾಯುತ್ತ ಕುಳಿತಿದ್ದಳು.
ಈ ಮಧ್ಯೆ, ಫರಾ ಅಂಜುಮ್ ಕ್ಲಿನಿಕ್‌ಗೆ ಭೇಟಿ ನೀಡಿದ ಬಗ್ಗೆ ಮೊದಲ ಪತ್ನಿ ಆಯೇಷಾಗೆ ಯಾರೋ ಮಾಹಿತಿ ನೀಡಿದ್ಧಾರೆ. ಇದರಿಂದ ಕುಪಿತಳಾದ ಆಯೇಷಾ ತನ್ನ ಮಹಿಳಾ ಸಹಚರರೊಂದಿಗೆ ಸ್ಥಳಕ್ಕಾಗಮಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ. ಗಲಾಟೆ ಕೇಳಿ ಸ್ಥಳೀಯರು ನೆರವಿಗೆ ಧಾವಿಸಿದ್ದು, ಫರಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯು ಕ್ಲಿನಿಕ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಂತರ, ಫರಾ ಅಂಜುಮ್ ಸಿಸಿಟಿವಿ ಕ್ಲಿಪ್‌ನೊಂದಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ತನ್ನ ಪತಿ ಖಾಸಿಂ ಅಲಿ, ಅವರ ಮೊದಲ ಪತ್ನಿ ಆಯೇಷಾ ಮತ್ತು ಆಕೆಯ ಸ್ನೇಹಿತರಾದ ಫರ್ಜಾನಾ, ಗುಲ್ಶನ್, ನೋಮಾನಾ, ಸೈಮಾ, ಸಿಮ್ರಾನ್ ಮತ್ತು ನವೀಸಾ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಆದರೆ ದೂರು ಮಾತ್ರ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ವಿನಯ್ ಕುಮಾರ್ ಗೌತಮ್ ಹೇಳಿದ್ದಾರೆ.(ಏಜೆನ್ಸೀಸ್)