

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಪುಟ್ಟಹಳ್ಳಿಯಿಂದ ಆರಂಭವಾದ ಧ್ಯಾನದ ಆಂದೋಲನವು ಪ್ರಸಕ್ತ ಪ್ರಪಂಚದ 180ಕ್ಕೂ ಅಧಿಕ ದೇಶಗಳಿಗೆ ವ್ಯಾಪಿಸಿ, ಅಲ್ಲಿ ಆಂತರಿಕ ಮತ್ತು ಬಾಹ್ಯ ಪರಿವರ್ತನೆಗೆ ಕಾರಣವಾಗಿರುವುದನ್ನು ಜಗತ್ತೇ ನಿಬ್ಬೆರಗಿನಿಂದ ನೋಡುತ್ತಿದೆ, ಮಾತ್ರವಲ್ಲ ಧ್ಯಾನದ ಮಹಿಮೆಯಿಂದ ಪುಳಕಿತಗೊಂಡಿದೆ. ಈ ಪರಿವರ್ತನೆಯ ಶಕ್ತಿಯೇ ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕರು ಮತ್ತು ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ.
ಜನಸಾಮಾನ್ಯರ ಪರಿವರ್ತನೆ ಮಾತ್ರವಲ್ಲ, ಧ್ಯಾನದಿಂದ ಬಂಡುಕೋರರ, ಉಗ್ರರ, ನಕ್ಸಲರ, ಕೈದಿಗಳ ಮನಪರಿವರ್ತನೆ ಮಾಡಿ, ಅವರನ್ನು ಶಾಂತಿ, ಸೌಹಾರ್ದದ ದಾರಿಯಲ್ಲಿ ತೆಗೆದುಕೊಂಡು ಬಂದವರು ಶ್ರೀ ಶ್ರೀ ರವಿಶಂಕರ್ ಗುರೂಜಿ. ಧ್ಯಾನದ ಮಹತ್ವದ ಕ್ರಮವಾಗಿರುವ ಸುದರ್ಶನ ಕ್ರಿಯೆಯಿಂದ ತಂದಿರುವ ಪರಿವರ್ತನೆಯಂತೂ ( ಕ್ರಮಬದ್ಧ ಉಸಿರಾಟದೊಂದಿಗೆ ಧ್ಯಾನ ಮಾಡುವ ಸರಳ ತಂತ್ರವೇ ಸುದರ್ಶನ ಕ್ರಿಯೆ) ಅನನ್ಯ. ಹಾಗಂತ, ಇದು ಕೆಲವೇ ಸಮಯದಲ್ಲಿ ನೆರವೇರಿದ ಸಾಧನೆಯಲ್ಲ. ಕಳೆದ 42 ವರ್ಷಗಳಿಂದ (1982) ಅವಿರತವಾಗಿ ರವಿಶಂಕರ್ ಗುರೂಜಿ ಧ್ಯಾನದ ಲಾಭಗಳನ್ನು 180 ದೇಶಗಳ 500 ಮಿಲಿಯನ್ ಜನರಿಗೆ ತಲುಪಿಸಿದ್ದಾರೆ. ಕೋವಿಡ್ ಅವಧಿಯಲ್ಲಿ (2020 ಮತ್ತು 2021) ಜನಸಂಚಾರವೇ ಇಲ್ಲದ ಸಂದರ್ಭದಲ್ಲಿ ಮತ್ತು ಸಮಾಜದಲ್ಲಿ ಜೀವನೋತ್ಸಾಹವೇ ಕಳೆದುಹೋಗಿ ನೈರಾಶ್ಯ ಆವರಿಸಿದ್ದ ಹೊತ್ತಲ್ಲಿ ಗುರೂಜಿ ಅವರು ಆನ್ಲೈನ್ ಮುಖಾಂತರವೇ ದೇಶ ಮತ್ತು ವಿದೇಶಗಳ ಲಕ್ಷಾಂತರ ಜನರಿಗೆ ಧ್ಯಾನವನ್ನು ಹೇಳಿಕೊಡುವ ಮೂಲಕ ಜನರನ್ನು ದುಃಖ, ನೋವಿನಿಂದ ಹೊರತಂದು ಮತ್ತೆ ಬದುಕು ಕಟ್ಟಿಕೊಳ್ಳುವಂತೆ ಮಾಡಿದರು.
ಪ್ರಸ್ತುತ 180 ರಾಷ್ಟ್ರಗಳಲ್ಲಿ ಆರ್ಟ್ ಆಫ್ ಲಿವಿಂಗ್ನ 30 ಸಾವಿರ ಶಿಕ್ಷಕರು ಯೋಗ ಮತ್ತು ಪ್ರಾಣಾಯಾಮವನ್ನು ಹೇಳಿಕೊಡುತ್ತಿದ್ದರೆ, 10 ಲಕ್ಷ ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಜಾಗತಿಕವಾಗಿ 8 ಲಕ್ಷ ಕೈದಿಗಳಿಗೆ ಧ್ಯಾನ ಹೇಳಿಕೊಟ್ಟು, ಅವರ ಬದುಕಿಗೆ ಹೊಸ ಮಾರ್ಗ ತೋರಿಸಲಾಗಿದೆ. ಅರ್ಜೆಂಟಿನಾದಲ್ಲಂತೂ ಏಕಕಾಲಕ್ಕೆ 1.50 ಲಕ್ಷ ಜನರು ಶ್ರೀ ಶ್ರೀ ನೇತೃತ್ವದಲ್ಲಿ ಧ್ಯಾನ ಮಾಡಿದ್ದು ದಾಖಲೆಯೇ ಸರಿ.
ಶಾಂತಿ ಸ್ಥಾಪನೆ: ‘ಧ್ಯಾನಕ್ಕೆ ಪರಿವರ್ತಿಸುವ ಶಕ್ತಿಯಿದೆ’ ಎಂಬ ರವಿಶಂಕರ್ ಗುರೂಜಿಯವರ ವಿಶ್ವಾಸವು, ಬದಲಾವಣೆಯ ಬೆಳಕಾಗಿ ಗೋಚರಿಸುತ್ತಿದೆ. ಜಗತ್ತಿನಾದ್ಯಂತ ಅವರು ಶಾಂತಿ-ಸ್ಥಾಪನೆಯ ಕಾರ್ಯಗಳಲ್ಲಿ ಸಾಧಿಸಿದ ಯಶಸ್ಸು ಅಸಾಧಾರಣ. ಶ್ರೀಲಂಕಾ, ಇರಾಕ್, ವೆನೆಜುವೆಲಾ ಮತ್ತು ಕೊಲಂಬಿಯಾದಂಥ ಸಂಘರ್ಷ-ಪೀಡಿತ ಪ್ರದೇಶಗಳಲ್ಲಿ ಶಾಂತಿ ಮಾತುಕತೆಗಳಲ್ಲಿ ಮಧ್ಯಸ್ಥಿಕೆ ವಹಿಸಿ, ಶಾಂತಿಸ್ಥಾಪನೆ ಪ್ರಕ್ರಿಯೆಯಲ್ಲಿ ಪ್ರಗತಿ ಸಾಧಿಸಿದ್ದಾರೆ. ಅವರು ಊಅಇ ಮತ್ತು ಕೊಲಂಬಿಯಾ ಸರ್ಕಾರದ ನಡುವಿನ 52 ವರ್ಷಗಳ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದಲ್ಲಿ, 500 ವರ್ಷಗಳಷ್ಟು ಹಳೆಯದಾದ ಬಾಬರಿ ಕಟ್ಟಡ-ರಾಮಮಂದಿರ ಸಂಘರ್ಷದ ಮಧ್ಯಸ್ಥಿಕೆಯಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ವೈವಿಧ್ಯಮಯ ಸಮುದಾಯಗಳ ನಡುವೆ ಸಂಧಾನ ಮಾತುಕತೆಯನ್ನು ನಡೆಸುವ ಗುರೂಜಿ ಅವರ ವಿಧಾನವು, ಸಮಾಜದಲ್ಲಿ ಒಡಕು ಇರುವಾಗ ಹೇಗೆ ಧ್ಯಾನವು ಸ್ಪಷ್ಟತೆ, ಸಹಾನುಭೂತಿಗಳನ್ನು ಬೆಳೆಸುತ್ತದೆ ಎಂಬುದಕ್ಕೆ ಸಾಕ್ಷಿ. ಕಳೆದ 43 ವರ್ಷಗಳಲ್ಲಿ ಅವರು ಕೈಗೊಂಡ ಪ್ರಯತ್ನಗಳು ಈಗ ಮತ್ತೊಂದು ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ವಿಶ್ವಸಂಸ್ಥೆ ಡಿಸೆಂಬರ್ 21ನ್ನು ‘ವಿಶ್ವ ಧ್ಯಾನ ದಿನ’ ಎಂದು ಅಧಿಕೃತವಾಗಿ ಘೋಷಿಸಿದೆ.
ಅಕ್ಷರದ ಬೆಳಕು: ಗ್ರಾಮೀಣ ಪ್ರದೇಶ ಅಥವಾ ಯಾವುದೇ ಸವಲತ್ತುಗಳು ಇಲ್ಲದ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಶಯದಿಂದ ಆರ್ಟ್ ಆಫ್ ಲಿವಿಂಗ್ ದೇಶದ ಗ್ರಾಮೀಣ ಭಾಗಗಳಲ್ಲಿ 1,262 ಶಾಲೆಗಳನ್ನು ನಡೆಸುತ್ತಿದ್ದು, 10 ಲಕ್ಷ ಮಕ್ಕಳು ಇದರಿಂದ ಅಕ್ಷರ ಬೆಳಕು ಪಡೆದುಕೊಂಡು, ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಈ ಗ್ರಾಮೀಣ ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಶಿಕ್ಷಣ ಒದಗಿಸುತ್ತಿರುವುದು ಗಮನಾರ್ಹ.
ವಿಶ್ವಸಂಸ್ಥೆಯಲ್ಲಿ ಭಾಷಣ: ನ್ಯೂಯಾರ್ಕ್ನ ವಿಶ್ವಸಂಸ್ಥೆಯ ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಇಂದು (ಶನಿವಾರ) ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಈ ಮಹತ್ವಪೂರ್ಣ ದಿನದಂದು ಶ್ರೀ ಶ್ರೀ ರವಿಶಂಕರ ಗುರೂಜಿ ವಿಶ್ವಸಂಸ್ಥೆಯಲ್ಲಿ ಮುಖ್ಯ ಭಾಷಣ ನೀಡಲಿದ್ದಾರೆ. ಈ ಪ್ರಮುಖವಾದ ದಿನವನ್ನು ‘ವಿಶ್ವಶಾಂತಿ ಹಾಗೂ ಸಾಮರಸ್ಯಕ್ಕಾಗಿ ಧ್ಯಾನ’ ಎಂದು ಕರೆಯಲಾಗಿದೆ. ಇದಕ್ಕೂ ಮುನ್ನ ಜಾಗತಿಕ ಧ್ಯಾನವನ್ನು ನಡೆಸಿಕೊಡಲಿದ್ದಾರೆ (ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ). ಈ ಕಾರ್ಯಕ್ರಮದ ನೇರಪ್ರಸಾರದಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆ ಇದೆ.
ಆಂತರಿಕ ಶಾಂತಿ, ಬದುಕಿನ ನೆಮ್ಮದಿಗೆ ಬೇಕು ಧ್ಯಾನ: ಭಾರತೀಯ ಜೀವನಧರ್ಮ ಮೊದಲಿನಿಂದಲೂ ಆಂತರಿಕ ಶಾಂತಿಗೆ ಒತ್ತು ನೀಡಿದೆ. ಆದರೆ, ಇಂದಿನ ದಿನಗಳಲ್ಲಿ ಬಹುತೇಕರ ಬದುಕು ಒತ್ತಡದಿಂದ ಕೂಡಿದೆ. ಮಾನಸಿಕ ತಲ್ಲಣಗಳನ್ನು, ಅಶಾಂತಿಯನ್ನು ದೂರಗೊಳಿಸಲು ಧ್ಯಾನವೇ ಅತ್ಯಂತ ಸರಳ, ಸಮರ್ಥವಾದ ಮಾರ್ಗ. ಅದಕ್ಕೆಂದೆ, ಜಗತ್ತು ಕೂಡ ಈಗ ಧ್ಯಾನದ ಮಹತ್ವವನ್ನು ಅರಿತುಕೊಂಡಿದೆ ಮತ್ತು ಜೀವನಕ್ರಮದಲ್ಲಿ ನಿತ್ಯಾನುಷ್ಠಾನಕ್ಕೆ ತರುತ್ತಿದೆ ಎಂಬುದು ಸಮಾಧಾನದ ವಿಷಯ. ವಿಶ್ವಸಂಸ್ಥೆ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿ, ಆಚರಿಸುತ್ತಿದೆ. ಈಗ ಡಿಸೆಂಬರ್ 21ನ್ನು ‘ವಿಶ್ವ ಧ್ಯಾನ ದಿನ’ವೆಂದು ಘೋಷಿಸಿದ್ದು, ಇದೇ ಮೊದಲಬಾರಿಗೆ ಜಗತ್ತಿನಾದ್ಯಂತ ಇದನ್ನು ಆಚರಿಸಲಾಗುತ್ತಿದೆ.
ಕಾಶ್ಮೀರದಲ್ಲಿ ಪರಿವರ್ತನೆಯ ಗಾಳಿ: ಜಮ್ಮು-ಕಾಶ್ಮೀರ ಎಂದಾಕ್ಷಣ ಕಣ್ಮುಂದೆ ಬರುವುದೇ ಹಿಂಸೆ, ಅಶಾಂತಿ. ಆದರೆ, ಈ ಕಣಿವೆ ಪ್ರದೇಶದಲ್ಲಿ ಸುದರ್ಶನ ಕ್ರಿಯಾ ಮತ್ತು ಧ್ಯಾನದ ಇತರ ಸರಳ ತಂತ್ರಗಳ ಮೂಲಕ ಸಹಸ್ರಾರು ಜನರ ಬಾಳಲ್ಲಿ ಪರಿವರ್ತನೆ ತರಲಾಗಿದೆ. ಭಯೋತ್ಪಾದಕ ದಾಳಿಗಳಲ್ಲಿ ಮೃತಪಟ್ಟ ಯೋಧರು ಮತ್ತು ನಾಗರಿಕರ ಕುಟುಂಬದವರಿಗೆ ವಿಶೇಷ ಧ್ಯಾನ ಶಿಬಿರಗಳನ್ನು ನಡೆಸಿ, ಅವರ ಆತ್ಮಸ್ಥೈರ್ಯ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲ, ತಪು್ಪದಾರಿಗಿಳಿದು ಉಗ್ರ ತರಬೇತಿ ಪಡೆಯಲು ಹೊರಟಿದ್ದ ಎಷ್ಟೋ ಯುವಕರಿಗೆ ಸತ್ಯ ಮನವರಿಕೆ ಮಾಡಿಕೊಟ್ಟು, ಧ್ಯಾನದ ಮೂಲಕ ಅವರ ಜೀವನ ಪರಿವರ್ತನೆ ಮಾಡಿದ ಮತ್ತು ಅವರು ಶಾಂತಿಮಾರ್ಗದಲ್ಲಿ ಪಯಣಿಸುವಂತೆ ಮಾಡಿದ ಹೆಗ್ಗಳಿಕೆ ರವಿಶಂಕರ್ ಗುರೂಜಿ ಅವರದ್ದು.
| ಶ್ರೀ ಶ್ರೀ ರವಿಶಂಕರ್ ಗುರೂಜಿ ಜಾಗತಿಕ ಆಧ್ಯಾತ್ಮಿಕ ನಾಯಕರು