

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು(KPSC) ನಡೆಸುತ್ತಿರುವ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ಪರೀಕ್ಷೆಯಲ್ಲಿ ಆಗಿರುವ ಅನ್ಯಾಯದಿಂದ ಸಾಮೂಹಿಕವಾಗಿ ಪರೀಕ್ಷಾರ್ಥಿಗಳಿಗೆ ದಯಾಮರಣ ನೀಡಿ ಪುಣ್ಯ ಕಟ್ಕೊಳಿ ಎಂದು ಹೆಸರೇಳಲಿಚ್ಚಿಸದ ಅಭ್ಯರ್ಥಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ.
384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ 70,000 ಗ್ರಾಮೀಣ ಭಾಗದ, ಕನ್ನಡ ಮಾದ್ಯಮದ, ಕಡು ಬಡ ರೈತರ ಮಕ್ಕಳಿಗೆ ಅನ್ಯಾಯವಾಗಿದೆ. ಈ ಬಡ ಅಭ್ಯರ್ಥಿಗಳಲ್ಲಿ ಕೋರ್ಟ್ನಲ್ಲಿ ದಾವೆ ಹೂಡಲು ಹಣವಿಲ್ಲ. ಹೀಗಾಗಿ, KPSC ಇದೇ ಅವಕಾಶವನ್ನು ಬಳಸಿಕೊಂಡು ತರಾತುರಿಯಲ್ಲಿ ಪರೀಕ್ಷೆ ನಡೆಸಿ ಬಡ ವಿದ್ಯಾರ್ಥಿಗಳನ್ನು ಅವಕಾಶಗಳಿಂದ ದೂರ ಇಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
KPSCಯು 2023-24 ನೇ ಸಾಲಿಗೆ ಕರೆದಿರುವ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ 2024 ಡಿ.29 ರಂದು ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಒಟ್ಟು 79 ಪ್ರಶ್ನೆಗಳು ಕನ್ನಡ ಭಾಷಾಂತರ ದೋಷದಿಂದ ಕೂಡಿರುವ ಕಾರಣ, ಮರು ಪರೀಕ್ಷೆ ಅಥವಾ ಮರು ಅಧಿಸೂಚನೆ ನಡೆಸಲು ಕೋರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುತ್ತೇವೆ.
ಮೇಲ್ಮನವಿಯನ್ನು ಪುರಸ್ಕರಿಸಿದ ಕೋರ್ಟ್ 2024ರ ಏ.24ರ ಮಧ್ಯಂತರ ಆದೇಶದಲ್ಲಿ ಕನ್ನಡ ಭಾಷಾಂತರ ಲೋಪವಾಗಿರುವುದನ್ನು ಪರಿಗಣಿಸಿ ಅರ್ಜಿ ಸಲ್ಲಿಸಿದ 84 ಜನರಿಗೆ ಮಾತ್ರ 2025ರ ಮೇ.03 ರಿಂದ ಮೇ.09ರವರೆಗೆ ನಡೆಯುವ ಮುಖ್ಯ ಪರೀಕ್ಷೆಗೆ ಅವಕಾಶ ನೀಡಿದೆ.
ಇದೇ ಅವಕಾಶವನ್ನು ಮುಂದಿಟ್ಟುಕೊಂಡು KPSCಯು ಗ್ರಾಮೀಣ ಭಾಗದ ಕನ್ನಡ ಮಾದ್ಯಮದ 70000 ಕ್ಕಿಂತ ಹೆಚ್ಚಿನ ಮಕ್ಕಳಿಗೆ ಅವಕಾಶ ವಂಚಿತರನ್ನಾಗಿಸಲು ತರಾತುರಿಯಲ್ಲಿ ಮುಖ್ಯಪರೀಕ್ಷೆಗೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಹೀಗಾಗಿ, ರಾಷ್ಟ್ರಪತಿಗಳೇ ನಾವು ಬಡವರಾಗಿದ್ದೇ ತಪ್ಪಾ, ನಮಗೊಂದೇ ದಾರಿ ನಮ್ಮ ಕನಸುಗಳು ನಮ್ಮೆದುರೇ ಸುಟ್ಟು ಹೋಗುವ ಮುನ್ನ ನಮಗೆ ದಯಾಮರಣ ನೀಡಿ ಪುಣ್ಯ ಕಟ್ಟುಕೊಳ್ಳಿ. ನ್ಯಾಯದ ಪ್ರತಿಯೊಂದು ಬಾಗಿಲು ನಮಗೆ ಮುಚ್ಚಿ ಆಗಿದೆ. ಇದೊಂದೇ ನಮಗೆ ಉಳಿದಿರುವ ಮಾರ್ಗ. ಆದ್ದರಿಂದ ನಮ್ಮ ಮನವಿ ಪರಿಗಣಿಸಿ ಎಂದು ಒತ್ತಾಯಿಸಿದ್ದಾರೆ.(ಗ್ರಾಮೀಣ ಭಾಗದ ಬಡ ಕನ್ನಡ ಮಾದ್ಯಮದ ನೊಂದ ಅಭ್ಯರ್ಥಿಗಳು)