ವಿದ್ಯುತ್​ಗೂ ಗಿವ್​ಇಟ್​ಅಪ್!; ನೀರಾವರಿ ಪಂಪ್​ಸೆಟ್​ಗಳ ಉಚಿತ ಪೂರೈಕೆಗೆ ಅನ್ವಯ; ಶೀಘ್ರ ಅಭಿಯಾನ ಕೈಗೊಳ್ಳಲು ರಾಜ್ಯ ಸರ್ಕಾರದ ಚಿಂತನೆ

front 2
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ವಿದ್ಯುತ್ ಬಳಕೆ, ಬೇಡಿಕೆ, ಹೂಡಿಕೆ ಹಾಗೂ ಬದ್ಧತಾ ವೆಚ್ಚ ಸರಿದೂಗಿಸುವುದಕ್ಕಾಗಿ ಹಲವು ಕಸರತ್ತುಗಳಿಗೆ ಕೈ ಹಾಕಿರುವ ಸರ್ಕಾರ ನೀರಾವರಿ ಪಂಪ್​ಸೆಟ್​ಗಳ (ಐಪಿ ಸೆಟ್) ಉಚಿತ ವಿದ್ಯುತ್ ಪೂರೈಕೆ ಸೌಕರ್ಯವನ್ನು ಜನರು ಸ್ವಯಂಪ್ರೇರಿತವಾಗಿ ತ್ಯಜಿಸುವ ಅಭಿಯಾನ ಹಮ್ಮಿಕೊಳ್ಳುವ ಚಿಂತನೆ ನಡೆಸಿದೆ.

ಮಿತವ್ಯಯ ಮತ್ತು ಬಳಕೆ ನಿಖರತೆ ತಿಳಿಯಲೆಂದು ಐಪಿ ಸೆಟ್​ಗಳಿಗೆ ಮೀಟರ್ ಅಳವಡಿಕೆಗೆ ಹಿಂದಿನ ಸರ್ಕಾರಗಳು ಪ್ರಯತ್ನಿಸಿ ಕೈಸುಟ್ಟುಕೊಂಡದ್ದಿದೆ. ಹೀಗಾಗಿ ಆರ್ಥಿಕ ಮುಗ್ಗಟ್ಟಿನ ಕಾರಣವೊಡ್ಡಿ ಉಚಿತ ವಿದ್ಯುತ್ ಪೂರೈಕೆಗೆ ಕತ್ತರಿ ಪ್ರಯೋಗಿಸಿದರೆ ‘ಜೇನುಗೂಡಿಗೆ ಕಲ್ಲು ಹೊಡೆದಂತೆ’ ಎಂಬುದು ಸರ್ಕಾರಕ್ಕೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಗೆ ಮೂಲ ಸವಲತ್ತುಗಳ ಸುಧಾರಣೆ, ಎಸ್ಕಾಂಗಳ ಮೇಲಿನ ಆರ್ಥಿಕ ಭಾರ ತಗ್ಗಿಸಲು ‘ಗಿವ್​ಇಟ್​ಅಪ್’ ಆಂದೋಲನ ಕೈಗೆತ್ತಿಕೊಳ್ಳಲು ಉತ್ಸುಕವಾಗಿದೆ.

ಕೇಂದ್ರದ ಮಾದರಿ ಕ್ರಮ: ಅಡುಗೆ ಅನಿಲ ಸಿಲಿಂಡರ್​ಗೆ ನೀಡುತ್ತಿರುವ ಸಬ್ಸಿಡಿ ವೆಚ್ಚ ತಗ್ಗಿಸಲು ಕೇಂದ್ರ ಸರ್ಕಾರ ‘ಗಿವ್​ಇಟ್​ಅಪ್’ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಿದೆ. ಉಳ್ಳವರು, ಆಸಕ್ತರು ಸ್ವಯಂಪ್ರೇರಿತರಾಗಿ ಗ್ಯಾಸ್ ಸಿಲಿಂಡರ್ ಸಹಾಯಧನ ತ್ಯಾಗ ಮಾಡುವುದು ಇದರ ಪರಿಕಲ್ಪನೆಯಾಗಿದ್ದು, ದೇಶವ್ಯಾಪಿ ಉತ್ತಮ ಸ್ಪಂದನೆ ಲಭಿಸಿದೆ. ಇದೇ ಮಾದರಿಯನ್ನು ನೀರಾವರಿ ಐಪಿ ಸೆಟ್​ಗಳಿಗೆ ಫ್ರೀ ಕರೆಂಟ್ ಸ್ಕೀಮ್ೆ ಅನ್ವಯಿಸಿ, ಅಭಿಯಾನ ಮೂಲಕ ಪ್ರೋತ್ಸಾಹಿಸುವುದು ಸರ್ಕಾರದ ಚಿಂತನೆಯ ತಿರುಳಾಗಿದೆ.

ಚಿಂತನೆಗೆ ಕಾರಣ: ರೈತರಿಗೆ ನೀರಾವರಿ ಪಂಪ್​ಸೆಟ್​ಗಳಿಗೆ ಗರಿಷ್ಠ 10 ಅಶ್ವಶಕ್ತಿ ಸಾಮರ್ಥ್ಯದ ತನಕ ದಿನಕ್ಕೆ ಏಳು ತಾಸು ಮೂರು ಫೇಸ್ ಉಚಿತವಾಗಿ ಪೂರೈಸಲಾಗುತ್ತದೆ. ಈ ನೀತಿಯನ್ನು ಎಲ್ಲ ರೈತರಿಗೂ ಏಕರೂಪವಾಗಿ ಅನ್ವಯಿಸಲಾಗಿದೆ. ದೊಡ್ಡ ರೈತರು, ಶ್ರೀಮಂತರು, ಉದ್ಯಮ-ವಹಿವಾಟು ಉಳ್ಳವರು ಹೊಂದಿದ ನೀರಾವರಿ ಐಪಿ ಸೆಟ್​ಗಳಿಗೂ ಉಚಿತ ವಿದ್ಯುತ್ ಪೂರೈಕೆಯಾಗುತ್ತಿದೆ. ಇಂತಹವರು ಉಚಿತ ವಿದ್ಯುತ್ ಸೌಲಭ್ಯ ತ್ಯಜಿಸಲು ಸಾಧ್ಯವಿದೆ. ಸ್ವಯಂಪ್ರೇರಿತವಾಗಿ ಮುಂದೆ ಬಂದರೆ ಪ್ರಕ್ರಿಯೆ ಸುಗಮವಾಗಲಿದ್ದು, ವಿದ್ಯುತ್ ಸವಲತ್ತು ಸುಧಾರಣೆಗೆ ನೆರವಾಗಲಿದೆ. ತೋಟಗಾರಿಕೆ, ಬಹು ವಾರ್ಷಿಕ ಬೆಳೆ ಬೆಳೆದ ಕ್ಷೇತ್ರಗಳು ಪ್ರವಾಸೋದ್ಯಮದ ಸ್ಪರ್ಶ ಪಡೆದಿದ್ದು, ಫಾಮ್ರ್ ಹೌಸ್ ಮೂಲಕ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿರುವವರಿಗೆ ವಿದ್ಯುತ್ ಉಚಿತ ಸರಬರಾಜು ಔಚಿತ್ಯವೇನು? ಎಂದು ಮೂಲಗಳು ಕೇಳಿವೆ.

ಶೇ.48 ಪೋಲು: ಬೆಂಗಳೂರು ನಗರದಲ್ಲೇ ಶೇ.48 ನೀರು ಲೀಕೇಜ್, ಕಳ್ಳತನ, ಕೊಳಾಯಿ ಬಳಕೆ ಇಲ್ಲದೇ ಇರುವುದರಿಂದ ಪೋಲಾಗುತ್ತಿದೆ. ಆದ್ದರಿಂದ ಬೆಂಗಳೂರಿನಲ್ಲಿ 1500 ಎಂಎಲ್​ಡಿ ಲಭ್ಯವಿದ್ದರೂ ಬಳಕೆಯಾಗುತ್ತಿರುವುದು 750 ಎಂಎಲ್​ಡಿ ಮಾತ್ರ. ಲೆಕ್ಕಕ್ಕೆ ಸಿಕ್ಕದ ನೀರನ್ನು ಪತ್ತೆ ಹಚ್ಚುವ ಹೊಣೆಯನ್ನು ಕಂಪನಿಯೊಂದಕ್ಕೆ ನೀಡಲಾಗಿದ್ದರೂ ಪರಿಣಾಮಕಾರಿ ಪ್ರಯೋಜನವಾಗಿಲ್ಲ.

ಜಲ ಜೀವನ ಮಿಷನ್ ಯಶಸ್ವಿ: ಕೇಂದ್ರ ಸರ್ಕಾರ ರೂಪಿಸಿರುವ ಜಲ ಜೀವನ ಮಿಷನ್ ಅನುಷ್ಠಾನ ಸ್ವಲ್ಪ ನಿಧಾನವಾಗಿದ್ದರೂ, ಯೋಜನೆ ಜಾರಿಗೆ ಬಂದಿರುವ ಕಡೆ ನೀರಿನ ಉಳಿತಾಯವಾಗುತ್ತಿದೆ. ಮೊದಲು ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿತ್ತು. ಈಗ 24 ಗಂಟೆ ನೀರು ಲಭ್ಯತೆ ಇರುವುದರಿಂದ ಅನಗತ್ಯವಾಗಿ ತುಂಬಿಸಿಟ್ಟು ಪೋಲು ಮಾಡುತ್ತಿಲ್ಲ. ಅದರಿಂದ ಕೆಲವು ಕಡೆಗಳಲ್ಲಿ ಶೇ.17 ನೀರು ಉಳಿತಾಯವಾಗುತ್ತಿದೆ ಎಂಬ ಮಾಹಿತಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಹೊಸ ಕೆರೆಯನ್ನೇ ನಿರ್ಮಾಣ ಮಾಡಲಾಗಿದೆ.

ತಜ್ಞರು ಹೇಳೋದೇನು?

  • ಜನವಸತಿ ಪ್ರದೇಶಗಳ ಪೈಕಿ ಶೇ.43 ಕಡೆ ಕುಡಿಯುವ ನೀರಿನ ತೊಂದರೆ ಇದೆ
  • ಕಾಲಕ್ರಮೇಣ ನೀರಿನ ಕೊರತೆ ಹೆಚ್ಚಾಗುತ್ತದೆ
  • ರಾಜಸ್ಥಾನದ ನಂತರ ಹೆಚ್ಚು ಬರಪೀಡಿತ ಪ್ರದೇಶವಾಗಿರುವ ರಾಜ್ಯದಲ್ಲಿ ಅಂತರ್ಜಲ ಶೇ.69 ಕುಸಿತವಾಗಿದೆ.

ಉದ್ದೇಶ ಏನು?: ಉಚಿತ ವಿದ್ಯುತ್ ಪೂರೈಕೆ ನಿಲ್ಲಿಸಿದರೆ ರೈತರ ಆಕ್ರೋಶಕ್ಕೆ ಗುರಿಯಾಗಬೇಕು. ಹೀಗಾಗಿ ಗಿವ್​ಇಟ್​ಅಪ್ ಅಭಿಯಾನ ಯಶಸ್ವಿಯಾದಲ್ಲಿ ರೈತರಲ್ಲಿ ವಿರೋಧಿ ಭಾವನೆ ಮೂಡುವುದಿಲ್ಲ. ಹಾಗೆಯೇ ತಪು್ಪ ಸಂದೇಶವೂ ರವಾನೆಯಾಗದು. ಜತೆಗೆ ಆಸಕ್ತರು ಸ್ವಯಂಪ್ರೇರಿತರಾಗಿ ಉಚಿತ ವಿದ್ಯುತ್ ಸೌಲಭ್ಯ ಬೇಡವೆಂದರೆ ಅಷ್ಟು ವೆಚ್ಚ ಇಳಿಯಲಿದೆ ಎನ್ನುವ ಲೆಕ್ಕಾಚಾರವಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ. ನೀರಾವರಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಪೂರೈಕೆ ವ್ಯವಸ್ಥೆಯಿಂದ ಸೋರಿಕೆ, ನಷ್ಟ, ತಾಂತ್ರಿಕ ಸಮಸ್ಯೆ, ಗುಣಮಟ್ಟದಲ್ಲಿ ಲೋಪವೇ ಹೆಚ್ಚು. ಉಚಿತ ಬದಲಿಗೆ ಗುಣಮಟ್ಟದ ವಿದ್ಯುತ್ತನ್ನು ರಿಯಾಯಿತಿ ದರದಲ್ಲಿ ಪೂರೈಸಿದರೆ ಅನ್ನದಾತರಿಗೆ ಅನುಕೂಲ, ಸರ್ಕಾರಕ್ಕೂ ಹೊರೆ ತಗ್ಗಲಿದೆ. | ಕೆ.ಜೈರಾಜ್ ನಿವೃತ್ತ ಐಎಎಸ್ ಅಧಿಕಾರಿ.

ಅಂಕಿ-ಅಂಶಗಳು

  • 10 ಅಶ್ವಶಕ್ತಿ ಐಪಿ ಸೆಟ್​ಗೆ ಏಳು ತಾಸು ತ್ರಿಫೇಸ್​ನಲ್ಲಿ ಉಚಿತ ವಿದ್ಯುತ್ ಪೂರೈಕೆ
  • ವಿದ್ಯುತ್ ಬಳಕೆಯಾದ ಪ್ರಮಾಣ ತಿಳಿಯಲು ಫೀಡರ್​ಗಳಿಗೆ ಮೀಟರ್ ಅಳವಡಿಕೆ
  • ಪ್ರತಿ ಐದು ಅಶ್ವಶಕ್ತಿ ಪಂಪ್​ಸೆಟ್ ನಿರಂತರ 7 ತಾಸು ಚಾಲನೆಯಲ್ಲಿದ್ದರೆ ಮಾಸಿಕ 787.50 ಯೂನಿಟ್ ವಿದ್ಯುತ್ ಬಳಕೆ
  • ಪ್ರತಿ 10 ಅಶ್ವಶಕ್ತಿ ಪಂಪ್​ಸೆಟ್ ನಿರಂತರ 7 ತಾಸು ಚಾಲನೆಯಲ್ಲಿದ್ದರೆ ಮಾಸಿಕ 1575 ಯೂನಿಟ್ ವಿದ್ಯುತ್ ಬಳಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net