

ನವದೆಹಲಿ: ಕೆಲವು ವರ್ಷಗಳ ಹಿಂದೆ ಡೇಟಿಂಗ್, ಲಿವ್ ಇನ್ ರಿಲೇಶನ್, ಬಾಯ್ ಫ್ರೆಂಡ್ ಹಾಗೂ ಗರ್ಲ್ ಫ್ರೆಂಡ್ ಬಾಡಿಗೆಗೆ ಸಿಗುತ್ತಾರೆ ಎಂಬುದನ್ನು ನಾವು ವಿದೇಶಗಳಲ್ಲಿ ಮಾತ್ರ ನೋಡುತ್ತಿದ್ದೆವು ಹಾಗೂ ಕೇಳುತ್ತಿದ್ದೆವು. ಆದರೆ ಈ ಕೆಟ್ಟ ಸಂಸ್ಕೃತಿ ಇದೀಗ ಭಾರತಕ್ಕೂ ವಕ್ಕರಿಸಿವೆ. ಮೆಟ್ರೋ ನಗರಗಳಲ್ಲಿ ಲಿವ್ ಇನ್ ರಿಲೇಶನ್ಶಿಪ್ ತುಂಬಾ ಸಾಮಾನ್ಯವಾಗಿದೆ. ಇಲ್ಲಿಯವರೆಗೂ ಗೆಳತಿ ಮತ್ತು ಗೆಳೆಯನನ್ನು ಬಾಡಿಗೆಗೆ ತೆಗೆದುಕೊಳ್ಳುವ ವಿಧಾನ ಭಾರತದಲ್ಲಿ ಬಂದಿಲ್ಲ. ಆದರೆ, ಇದೀಗ ಅದು ಕೂಡ ಆಗಮಿಸಿದಂತಿದೆ. ದಿನಕ್ಕೆ ಇಷ್ಟು ಹಣ ಕೊಟ್ಟರೆ, ನಿಮ್ಮೊಂದಿಗೆ ಡೇಟ್ ಮಾಡಲು ಬರುತ್ತೇನೆ ಅಂತ ಯುವತಿಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಭಾರಿ ಚರ್ಚೆಯಾಗುತ್ತಿದೆ.
ನೀವು ಸಿಂಗಲ್ ಆಗಿ ಬೇಜಾರಾಗಿದ್ದೀರಾ? ನಾನು ನಿಮ್ಮೊಂದಿಗೆ ಡೇಟ್ ಮಾಡಲು ರೆಡಿ. ಆದರೆ, ದಿನಕ್ಕೆ 5 ಸಾವಿರ ರೂಪಾಯಿ ಕೊಡಬೇಕು ಎಂದು ಯುವತಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ. ಇದನ್ನು ನೋಡಿದ ನೆಟ್ಟಿಗರು ಒಂದು ಕ್ಷಣ ಶಾಕ್ ಆಗಿದ್ದಾರೆ. ಭಾರತದಲ್ಲೂ ಈ ಕೆಲಸ ಶುರು ಮಾಡಿದ್ದೀರಾ? ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್ ಆಫ್ ತಾಯಿ ಅಂತ ನೆಟ್ಟಿಗರು ಕಾಮೆಂಟ್ಸ್ ಕೂಡ ಹಾಕುತ್ತಿದ್ದಾರೆ. ‘
ಇತ್ತೀಚೆಗಷ್ಟೇ ದಿವ್ಯಾ ಗಿರಿ ಎಂಬ ಯುವತಿ ತಾನು ಗರ್ಲ್ ಫ್ರೆಂಡ್ ಆಗಿ ಡೇಟ್ ಮಾಡಲು ಸಿದ್ಧ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ನೀನು ಒಂಟಿಯಾಗಿದ್ದೀಯಾ? ಡೇಟಿಂಗ್‌ಗೆ ಹೋಗಬೇಕಾ? ನಾನು ನಿನ್ನ ಜೊತೆ ಬರಲು ರೆಡಿ. ನನ್ನನ್ನು ನಿನ್ನ ಗೆಳತಿಯಾಗಿ ಬಾಡಿಗೆಗೆ ಕರೆದುಕೊಂಡು ಹೋಗು ಬಾ ಮತ್ತು ಅದ್ಭುತವಾದ ನೆನಪುಗಳನ್ನು ಹೊಂದಿರಿ ಎಂದು ಯುವತಿ ಹೇಳಿದ್ದಾಳೆ. ಅಲ್ಲದೆ, ತನ್ನನ್ನು ಗೆಳತಿಯಾಗಿ ಡೇಟ್‌ಗೆ ಕರೆದುಕೊಂಡು ಹೋಗಲು ಎಷ್ಟು ಬಾಡಿಗೆ ಕೊಡಬೇಕು ಎಂಬ ದರ ಪಟ್ಟಿಯನ್ನು ವಿವರಿಸಿದ್ದಾರೆ. ಕಾಫಿ ಡೇಟ್‌ಗೆ 1500 ರೂ., ಮಾಮೂಲಿ ಡೇಟ್‌ಗೆ 2000 ರೂ., ಸಿನಿಮಾಗೆ ಹೋಗುವುದಕ್ಕೆ 2000, ಡಿನ್ನರ್ಗೆ 2000, ಫ್ಯಾಮಿಲಿ ಮೀಟಿಂಗ್ಗೆ 3000, ಯಾವುದಾದರೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು 3500 ರೂ. ಮತ್ತು ಬೈಕ್ ಡೇಟ್‌ಗೆ 4 ಸಾವಿರ ರೂ. ಕೊಡಬೇಕಂತೆ.
ಇದಿಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಡೇಟಿಂಗ್ ಪೋಟೋ ಪೋಸ್ಟ್ ಮಾಡಲು 6 ಸಾವಿರ ರೂಪಾಯಿ ಕೊಡಬೇಕು ಎಂದಿದ್ದಾಳೆ. ಇಡೀ ದಿನ ಒಟ್ಟಿಗೆ ಇರಬೇಕಾದರೆ 5 ಸಾವಿರ ರೂ., ಮನೆಯಲ್ಲಿ ಒಟ್ಟಿಗೆ ಅಡುಗೆ ಮಾಡಿ ತಿನ್ನಲು 3500 ರೂ., ಅವಳೊಂದಿಗೆ ಶಾಪಿಂಗ್ ಮಾಡಲು 4500 ರೂ. ಹಾಗೂ ಎರಡು ದಿನಗಳ ಕಾಲ ಒಟ್ಟಿಗೆ ಪ್ರವಾಸಕ್ಕೆ ಹೋಗಬೇಕಾದರೆ 10 ಸಾವಿರ ರೂ. ಪಾವತಿಸಬೇಕಂತೆ. ಈ ರೀತಿಯಾಗಿ, ಪ್ರತಿಯೊಂದಕ್ಕೂ ತನ್ನದೇಯಾದ ದರವನ್ನು ಯುವತಿ ನಿಗದಿಪಡಿಸಿದ್ದಾಳೆ ಎಂದು Free Press Journal ವರದಿ ಮಾಡಿದೆ.
ಯಾರು ಈ ಯುವತಿ? ಈ ಯುವತಿ ದೆಹಲಿ ಮೂಲದವಳು ಮತ್ತು ಇನ್ಸ್ಸ್ಟಾಗ್ರಾಂನಲ್ಲಿ ಆಕೆಯ ಖಾತೆಯನ್ನು divya_giri__ ಎಂದು ಗುರುತಿಸಲಾಗಿದೆ. ಈ ಯುವತಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ 11 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾಳೆ. ಇನ್ಸ್ಟಾ ಪ್ರೊಫೈಲ್ ಪ್ರಕಾರ ಆಕೆ ದಕ್ಷಿಣ ದೆಹಲಿಯವಳು. ತಾನು ಕಟ್ಟುನಿಟ್ಟಾದ ಸಸ್ಯಾಹಾರಿ ಎಂದು ಬರೆದುಕೊಂಡಿದ್ದಾಳೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಿಜವೇ? ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುವುದಕ್ಕಾಗಿ ಈ ರೀತಿ ಮಾಡಿದ್ದೀರಾ ಎಂದು ಕಾಮೆಂಟ್ ಮೂಲಕ ಯುವತಿಯನ್ನು ಪ್ರಶ್ನಿಸಲಾಗುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ನಿಮ್ಮ ಧೈರ್ಯಕ್ಕೆ ಹ್ಯಾಟ್ಸಾಫ್ ಎಂದು ನೆಟ್ಟಿಗರು ಹೇಳಿದ್ದಾರೆ. (ಏಜೆನ್ಸೀಸ್)