

ಕಾನ್ಪುರ: ಅಣ್ಣನನ್ನು ಕೊಂದ 20 ವರ್ಷದ ಯುವತಿ ಪೊಲೀಸರಿಗೆ ಶರಣಾಗಿ, ತಾನು ಸೋದರನನ್ನು ಕೊಲ್ಲಲು ಕಾರಣ ಏನು ಎಂಬುದನ್ನು ಹೇಳಿದ್ದಾಳೆ. ಅದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ಶಾಕ್ಗೆ ಒಳಗಾಗಿದ್ದಾರೆ.
ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದೀಪಕ್ ರಜಪೂತ್ ಎಂಬಾತ ಮೃತ ಯುವಕ. ತನ್ನ ತಂಗಿಯ ಕೈಯಿಂದಲೇ ಜೀವ ಕಳೆದುಕೊಂಡಿದ್ದಾನೆ. ಯುವತಿ ಕುಡುಗೋಲು ಮತ್ತು ಒನಕೆಯಿಂದ ಹೊಡೆದು ಅಣ್ಣನನ್ನು ಹತ್ಯೆ ಮಾಡಿದ್ದಾಳೆ. ಸೀದಾ ಪೊಲೀಸ್ ಠಾಣೆಗೆ ಹೋಗಿ, ನಾನು ನನ್ನ ಸೋದರನನ್ನು ಕೊಂದು ಹಾಕಿದೆ. ಮನೆಯಲ್ಲಿ ಅಪ್ಪ-ಅಮ್ಮ ಇಲ್ಲದ ಹೊತ್ತಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ. ಅವನ ಕಿರುಕುಳ ತಡೆಯಲಾಗದೆ ಹತ್ಯೆ ಮಾಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ಯುವತಿ ಆಕೆಯ ಸೋದರನನ್ನು ಹತ್ಯೆ ಮಾಡಿದ ಸಂದರ್ಭದಲ್ಲಿ ಪಾಲಕರು, ಬೇಲಾ ಪಟ್ಟಣದಲ್ಲಿ ಇರುವ ಸಂಬಂಧಿಕರೋರ್ವರ ಮನೆಗೆ ಹೋಗಿದ್ದರು. ಅವರನ್ನು ಕರೆಸಿದಾಗ ತಮ್ಮ ಮಗಳು ಮಾಡಿದ ಆರೋಪವನ್ನು ಅಲ್ಲಗಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ಮೊದಲ ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಅಪ್ಪ-ಅಮ್ಮ ಯಾರೂ ಇರಲಿಲ್ಲ. ಆಗ ನನ್ನ ಸಹೋದರ ನನ್ನ ಮೇಲೆ ದೌರ್ಜನ್ಯ ಎಸಗಲು ಮುಂದಾದ. ಆಗ ಅಲ್ಲಿಯೇ ಇದ್ದ, ಕುಡುಗೋಲು, ಒನಕೆಗಳಿಂದ ಅವನ ಮೇಲೆ ಹಲ್ಲೆ ನಡೆಸಿದೆ. ಆತ ಗಂಭೀರವಾಗಿ ಗಾಯಗೊಂಡಿದ್ದ ಎಂದು ಆಕೆ ತಿಳಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಯುವತಿ ಬಂದು ತನ್ನ ಕೃತ್ಯವನ್ನು ಹೇಳುತ್ತಿದ್ದಂತೆ ಪೊಲೀಸರು ಅವಳನ್ನೂ ಕರೆದುಕೊಂಡು ಆಕೆಯ ಮನೆಗೆ ದೌಡಾಯಿಸಿದ್ದರು. ದೀಪಕ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆತ ಆಗಲೇ ಸತ್ತಿದ್ದಾನೆ ಎಂದು ವೈದ್ಯರು ಹೇಳಿದರು.
ಯುವತಿ ಮತ್ತು ಆಕೆಯ ಪಾಲಕರು ನೀಡುತ್ತಿರುವ ಹೇಳಿಕೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಕೊಲೆ ಹಿಂದಿನ ಸತ್ಯವನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)