

ಗಾಂಧಿನಗರ : ಉದ್ದನೇ ಕೂದಲಿನ ರಾಜಕುಮಾರಿ ರಪುನ್ಜೆಲ್ನ ಕಥೆ ಕೇಳಿದ್ದೀರಾ ? ಅಂಥದೇ ಒಬ್ಬ ನೀಳ ಕೂದಲ ಒಡತಿ ಗುಜರಾತಿನ ಮೋಡಾಸದಲ್ಲಿದ್ದಾಳೆ. ಅವಳ ಹೆಸರು ನೀಲಾಂಶಿ ಪಟೇಲ್. ಆಕೆಗೆ 18 ವರ್ಷ ತುಂಬುವ ಮುನ್ನ 2020 ರ ಜುಲೈನಲ್ಲಿ ಕೂದಲಿನ ಉದ್ದವನ್ನು ಅಳೆದಾಗ ಅದು 200 ಸೆಂಟಿಮೀಟರ್ ಉದ್ದವಾಗಿತ್ತು. ಅದಕ್ಕಾಗಿ ಅವಳು ಅತಿಉದ್ದ ಕೂದಲು ಹೊಂದಿದ ಹದಿಹರೆಯದ ಹುಡುಗಿಯಾಗಿ ಗಿನ್ನೀಸ್ ದಾಖಲೆ ಗೆದ್ದಿದ್ದಾಳೆ.
ತನ್ನ ಆರನೇ ವಯಸ್ಸಿನಲ್ಲಿ ಹೇರ್ ಸಲೂನಿನಲ್ಲಿ ಆದ ಕೆಟ್ಟ ಅನುಭವದ ನಂತರ ಪಟೇಲ್ ತನ್ನ ಕೂದಲಿಗೆ ಕತ್ತರಿ ತಾಗಿಸಲು ಬಿಟ್ಟಿರಲಿಲ್ಲವಂತೆ. ಆದರೆ ಇದೀಗ 12 ವರ್ಷಗಳ ನಂತರ ಹೇರ್ಕಟ್ನ ಪ್ರಸಂಗ ಒದಗಿಬಂದಿದೆ. ತನಗೆ ನಿಜ ಜಗತ್ತಿನ ರಪುನ್ಜೆಲ್ ಖ್ಯಾತಿಯನ್ನು ನೀಡಿದ ತನ್ನ ನೀಳ ಕೇಶವನ್ನು ನೀಲಾಂಶಿ ಪಟೇಲ್, ಅಮೆರಿಕದ ಮ್ಯೂಸಿಯಂ ಒಂದರಲ್ಲಿ ಭದ್ರವಾಗಿರಿಸಲು ಬಯಸಿದ್ದೇ ಇದಕ್ಕೆ ಕಾರಣ.
ಈ ಸಂದರ್ಭವನ್ನು ದಾಖಲುಗೊಳಿಸಲು ಗಿನ್ನೀಸ್ ವರ್ಲ್ಡ್ ರೆಕಾರ್ಡ್ಸ್ನವರು ಮಾಡಿರುವ ವಿಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ತನ್ನ ಉದ್ದನೇ ಕೂದಲನ್ನು ಪ್ರದರ್ಶಿಸಿ, ಅದಕ್ಕೆ ಬೈ ಬೈ ಹೇಳಿ, ಶಾರ್ಟ್ ಆದ ಹೇರ್ ಕಟ್ ಮಾಡಿಸಿಕೊಂಡಿದ್ದನ್ನು ಈ ವಿಡಿಯೋ ತೋರಿಸುತ್ತದೆ. "ನನ್ನ ಕೂದಲನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದರೆ ಅದು ಬೇರೆಯವರಿಗೆ ಸ್ಫೂರ್ತಿ ನೀಡಲಿ ಎಂಬ ಕಾರಣದಕ್ಕೆ ಮ್ಯೂಸಿಯಂಗೆ ನೀಡುತ್ತಿದ್ದೇನೆ" ಎಂದು ಪಟೇಲ್ ಹೇಳಿದ್ದಾಳೆ.
ತನ್ನ ಕೂದಲಿನ ವಿಲೇವಾರಿಗೆ ಪಟೇಲ್ಗೆ ಮೂರು ಆಯ್ಕೆಗಳಿದ್ದವಂತೆ - ಹರಾಜು ಹಾಕುವುದು, ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡುವುದು ಅಥವಾ ಮ್ಯೂಸಿಯಂಗೆ ನೀಡುವುದು. ಅವಳ ತಾಯಿ ಕಾಮಿನಿಬೇನ್ ಅವರ ಸಲಹೆಯಂತೆ ನೀಲಾಂಶಿ, ಗಿನ್ನೀಸ್ ದಾಖಲೆ ಮಾಡಿದ್ದ ತನ್ನ ಕೂದಲು ಪ್ರೇರಣಾದಾಯಕವಾಗಿ ಮ್ಯೂಸಿಯಂನಲ್ಲಿರಲಿ ಎಂದು ತೀರ್ಮಾನಿಸಿದ್ದಾಳೆ. ಕತ್ತರಿಸಿದ ಕೂದಲನ್ನು ಅಮೆರಿಕದ ರಿಪ್ಲಿಸ್ ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂಗೆ ನೀಡಿದ್ದಾಳೆ. ಇದೇ ಸಂದರ್ಭದಲ್ಲಿ ಆಕೆಯ ತಾಯಿ ತಮ್ಮ ಉದ್ದ ಕೂದಲಿನಲ್ಲಿ ಸ್ವಲ್ಪವನ್ನು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಲಿದ್ದಾರೆ ಎಂದು ಪಟೇಲ್ ತಿಳಿಸಿದ್ದಾಳೆ. (ಏಜೆನ್ಸೀಸ್)