ಒಂದೇ ಒಂದು ರಸ್ತೆ, ವಾಹನಗಳಿಲ್ಲದ ಗ್ರಾಮ! ಭೂಮಿಯ ಮೇಲಿನ ಸ್ವರ್ಗವಿದು, ಈ ಹಳ್ಳಿಯ ವಿಶೇಷತೆಗಳೇ ಅಚ್ಚರಿ | Giethoorn

Giethoorn
Published on

Giethoorn : ಒಂದು ಕ್ಷಣ ಕಣ್ಣು ಮುಚ್ಚಿದಾಗ ಹಕ್ಕಿಗಳ ಚಿಲಿಪಿಲಿ, ನವಿರಾದ ತಂಗಾಳಿ ಮೈ ಸೋಕಿದರೆ ಸಾಕು ಯಾರ ಮನಸ್ಸು ಬೇಕಾದರೂ ಒಮ್ಮೆ ಶಾಂತವಾಗುತ್ತದೆ. ಇದು ಪ್ರಕೃತಿಯ ಔಷಧವಾಗಿದೆ. ಆದರೆ, ಈ ಹೊಸ ತಂತ್ರಜ್ಞಾನಗಳ ಕಾಲದಲ್ಲಿ ಇದು ಸಾಧ್ಯವೇ. ದಿನ ಬೆಳಗಾದರೇ ವಾಹನಗಳ ಮೊರೆತವನ್ನು ಕೇಳುವ ಈ ಆಧುನಿಕ ಪ್ರಪಂಚದಲ್ಲಿ ಯಾವುದೇ ರಸ್ತೆಗಳಿಲ್ಲದ ಮತ್ತು ವಾಹನಗಳಿಲ್ಲದ ಒಂದು ಊರಿದೆ ಎಂದರೆ ನೀವು ನಂಬುತ್ತೀರಾ? ಹೌದು ನಂಬಲೇಬೇಕು. ಅಂಥದ್ದೇ ಊರನ್ನು ನಾವಿಂದು ನಿಮಗೆ ಪರಿಚಯಿಸುತ್ತೇವೆ.

ನೆದರ್ಲೆಂಡ್ಸ್​ನ ನಾರ್ಥ್​ ವೆನ್ನೀಸ್​ ಎಂದು ಕರೆಯಲ್ಪಡುವ ಗೀಥೋರ್ನ್ ಎಂಬ ಒಂದು ಹಳ್ಳಿ ಇದೆ. ಈ ಹಳ್ಳಿ ಸದಾ ನಗರದ ಗದ್ದಲದಿಂದ ದೂರವಿರುತ್ತದೆ ಮತ್ತು ಪ್ರಕೃತಿಯ ಎಲ್ಲಾ ಸೌಂದರ್ಯದಿಂದ ಆವೃತವಾಗಿದೆ. ಇಲ್ಲಿ ಜನಿಸಬೇಕೆಂದರೆ ನಿಜಕ್ಕೂ ಪುಣ್ಯ ಮಾಡಿರಲೇಬೇಕು. ಏಕೆಂದರೆ, ಇಲ್ಲಿನ ಮಂದಿ ಪ್ರಕೃತಿಯ ಮಡಿಲಲ್ಲೇ ಬದುಕುತ್ತಾರೆ.

Giethoorn

ಗೀಥೋರ್ನ್ ಹಳ್ಳಿಯಲ್ಲಿ ಯಾವುದೇ ರಸ್ತೆಗಳಿಲ್ಲ. ಬದಲಾಗಿ ಸಣ್ಣ ಕಾಲುವೆಗಳಿವೆ. ಈ ಕಾಲುವೆಗಳೇ ಈ ಹಳ್ಳಿಗರಿಗೆ ರಸ್ತೆಗಳಾಗಿವೆ. ದೋಣಿಗಳು ಮತ್ತು ಬಾತುಕೋಳಿಗಳ ಹಿಂಡುಗಳು ಸಾಂದರ್ಭಿಕವಾಗಿ ಕಾಲುವೆಯ ಮೂಲಕ ಹಾದು ಹೋಗುತ್ತವೆ. ಕಾಲುವೆಗಳ ಅಕ್ಕಪಕ್ಕದಲ್ಲಿ ಹಸಿರು ಹೊದಿಕೆಯ ಹುಲ್ಲುಗಾವಲುಗಳಿವೆ ಮತ್ತು ಸ್ವಲ್ಪ ಹಿಂದೆಯೇ ಗೋಡೆಗಳು ಅಥವಾ ಗೇಟ್‌ಗಳಿಲ್ಲದ 18 ನೇ ಶತಮಾನದ ಶೈಲಿಯ ಸಣ್ಣ ಮನೆಗಳಿವೆ. ಮನೆಗಳ ಸುತ್ತಲೂ ಸುಂದರವಾದ ಉದ್ಯಾನವನಗಳಿವೆ.

ನೆದರ್ಲೆಂಡ್ಸ್​ನ ಆಮ್‌ಸ್ಟರ್‌ಡ್ಯಾಮ್‌ನಿಂದ ಒಂದೂವರೆ ಗಂಟೆಗಳ ಪ್ರಯಾಣದಲ್ಲಿ ಗೀಥೋರ್ನ್ ಹಳ್ಳಿಯನ್ನು ತಲುಪಬಹುದು. 10ನೇ ಶತಮಾನದಲ್ಲಿ ಪ್ರವಾಹದ ಅವಶೇಷಗಳಾದ ಜೌಗು ಪ್ರದೇಶದಲ್ಲಿ ನೂರಾರು ಕುರಿಗಳ ಕೊಂಬುಗಳು ಪತ್ತೆಯಾದ ಬಳಿಕ ಇದಕ್ಕೆ ಗೀಥೋರ್ನ್ ಎಂಬ ಹೆಸರು ಬಂದಿತು. ಈ ಹಳ್ಳಿಯ ವಾತಾವರಣವನ್ನು ಸುಂದರವಾಗಿ ನಿರ್ವಹಿಸಲಾಗಿದೆ. ಈ ಗ್ರಾಮವನ್ನು 1230 ಎಡಿಯಲ್ಲಿ ಮೆಡಿಟರೇನಿಯನ್ ಪ್ರದೇಶದಿಂದ ವಲಸೆ ಬಂದ ಜನರು ಸ್ಥಾಪಿಸಿದರು. 1958ರಲ್ಲಿ ಡಚ್ ನಿರ್ದೇಶಕ ಬರ್ಟ್ ಹಂಸ್ಟ್ರಾ ಅವರ 'ಫ್ಯಾನ್‌ಫೇರ್' ಚಲನಚಿತ್ರದಿಂದ ಈ ಗ್ರಾಮವು ಪ್ರಸಿದ್ಧವಾಯಿತು.

Giethoorn 1

ಇನ್ನು ಈ ಹಳ್ಳಿಯ ಸೌಂದರ್ಯವನ್ನು ಸವಿಯಲು ಪ್ರಪಂಚದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ನಿತ್ಯಲೂ ಬರುತ್ತಾರೆ. ಪ್ರಕೃತಿಯ ಚಿಲುಮೆಗಳಂತೆ ಕಾಣುವ ಕಾಲುವೆಗಳ ಮೂಲಕ ದೋಣಿ ವಿಹಾರ ಮಾಡುವುದು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಪ್ರಯಾಣದ ಸಮಯದಲ್ಲಿ ದೋಣಿಯನ್ನು ನಿಲ್ಲಿಸಿ ಪಕ್ಕದಲ್ಲೇ ಇರುವ ರೆಸ್ಟೋರೆಂಟ್‌ಗಳಲ್ಲಿ ಬಗೆ ಬಗೆಯ ಖಾದ್ಯಗಳನ್ನು ಸವಿಯಬಹುದು. ವಿಸ್ತಾರವಾದ ಕಾಲುವೆ ಜಾಲಕ್ಕೆ ಅಡ್ಡಲಾಗಿ 180 ಮರದ ಸೇತುವೆಗಳಿವೆ. ಬಹುತೇಕ ಮನೆಗಳಿಗೆ ತೆರಳಲು ಸೇತುವೆ ದಾಟಬೇಕು. ಚಳಿಗಾಲದಲ್ಲಿ ಈ ಕಾಲುವೆಗಳು ಹೆಪ್ಪುಗಟ್ಟುವುದರಿಂದ ಅಂದರೆ, ಮಂಜುಗೆಡ್ಡೆಯಾಗುವುದರಿಂದ ಪ್ರವಾಸಿಗರು ಐಸ್ ಸ್ಕೇಟಿಂಗ್ ಪ್ರಯತ್ನಿಸಲು ಅವಕಾಶವಿದೆ.

ವಾಹನಗಳ ಬದಲಿಗೆ ದೋಣಿಗಳು: ಗೀಥೋರ್ನ್​ನಲ್ಲಿ ಕಾರು, ಬೈಕ್‌ಗಳ ಬದಲು ದೋಣಿ, ಸೈಕಲ್‌ಗಳಲ್ಲೇ ಎಲ್ಲರೂ ಪ್ರಯಾಣಿಸುತ್ತಾರೆ. ನಿಸರ್ಗಕ್ಕೆ ಅತ್ಯಂತ ಹತ್ತಿರವಾಗಿರುವ ಈ ಗ್ರಾಮಕ್ಕೆ ತೆರಳಲು ರಸ್ತೆಗಳಿಲ್ಲ. ಬದಲಾಗಿ ಸಣ್ಣ ಕಾಲುದಾರಿಗಳು ಮಾತ್ರ ಇವೆ. ಹೀಗಾಗಿ ಗ್ರಾಮಕ್ಕೆ ಬರುವ ಮುನ್ನ ವಾಹನಗಳನ್ನು ಹೊರಗೆ ನಿಲ್ಲಿಸಬೇಕು. ನಂತರ, ನೀವು ವಾಕಿಂಗ್, ಸೈಕ್ಲಿಂಗ್ ಅಥವಾ ದೋಣಿ ಮೂಲಕ ಇಲ್ಲಿಗೆ ತಲುಪಬಹುದು. ಕಾಲುವೆ ಬಳಿ ಸೈಕಲ್ ಪಥಗಳೂ ಇವೆ. ವಾಹನಗಳು ಪ್ರವೇಶಿಸದ ಕಾರಣ ವಾಯು ಮಾಲಿನ್ಯದ ಪ್ರಮಾಣ ಈ ಗ್ರಾಮದಲ್ಲಿ ತೀರಾ ಕಡಿಮೆಯಾಗಿದೆ. 38.47 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಗೀಥೋರ್ನ್​ ಹಳ್ಳಿ ಮೂರು ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net