ಕಾಂಗ್ರೆಸ್​ಗೆ ಹೊಸ ನಾಯಕನ ಆಯ್ಕೆ ವಿಚಾರ; ಕೈ ನಾಯಕರ ಒತ್ತಡಕ್ಕೆ ಮಣಿದರೆ ಸೋನಿಯಾ?

sonia-rahul
Published on

ನವದೆಹಲಿ: ಕಾಂಗ್ರೆಸ್​ನಲ್ಲಿ ನಾಯಕತ್ವದ ಬಗ್ಗೆ ವಿವಾದಗಳು ಉಂಟಾಗಿರುವಂತೆಯೇ, ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದಾರೆ. ಎಲ್ಲರೂ ಒಂದಾಗಿ ಹೊಸ ನಾಯಕನ ಆಯ್ಕೆ ಮಾಡಿ ಎಂದು ತಿಳಿಸಿದ್ದಾರೆ.

ಪಕ್ಷದ ಸಂಘಟನಾ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಆಗಬೇಕೆಂದು ಬಯಸಿ ಹಲವು ನಾಯಕರು ಬರೆದಿರುವ ಪತ್ರ, ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿರುವ ಸೋನಿಯಾ ಗಾಂಧಿ, ತಾನಿನ್ನು ಹೆಚ್ಚು ಕಾಲ ಜವಾಬ್ದಾರಿ ನಿಭಾಯಿಸಲಾರೆ, ಹೀಗಾಗಿ ಎಲ್ಲರೂ ಒಗ್ಗೂಡಿ ಹೊಸ ಅಧ್ಯಕ್ಷರ ಆಯ್ಕೆ ಮಾಡಿ ಎಂದು ಹೇಳಿದ್ದಾಗಿ ತಿಳಿದು ಬಂದಿದೆ.

ಕಳೆದ ಆಗಸ್ಟ್​ 10 ರಂದು ಸಭೆ ಸೇರಿದ್ದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿತ್ತು. ಆದರೆ, ಈ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಇಲ್ಲವೆಂದು ಸೋನಿಯಾ ತಿಳಿಸಿದ್ದರು ಎನ್ನಲಾಗಿದೆ.

ಗಾಂಧಿ ಕುಟುಂಬದರಲ್ಲದವರು ಪಕ್ಷದ ಅಧ್ಯಕ್ಷರಾಗಲಿ ಎಂದು ಈ ಹಿಂದೆಯೂ ಸೋನಿಯಾಗಾಂಧಿ ಹೇಳಿದ್ದರು. ಈ ಹುದ್ದೆಗೆ ನಿರಾಕರಿಸಿದ್ದ ರಾಹುಲ್ ಕೂಡ ಇದನ್ನೇ ಪ್ರತಿಪಾದಿಸಿದ್ದರು. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಕೂಡ ಈ ಹೇಳಿಕೆಯನ್ನು ಅನುಮೋದಿಸಿದ್ದರು.

ಹೀಗಾಗಿ ಸೋಮವಾರ ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್​​ಗೆ ಹೊಸ ನಾಯಕನ ಆಯ್ಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net