ಲಾಕ್​ಡೌನ್​ ತೆರವಿನ ಬಳಿಕ 8 ತಾಸು ಬದಲು 12 ತಾಸು ಕೆಲಸ ಮಾಡಲು ಸಿದ್ಧರಾಗಿ, ಸುಗ್ರೀವಾಜ್ಞೆ ತರಲಿದೆ ಕೇಂದ್ರ ಸರ್ಕಾರ

working hours
Published on

ನವದೆಹಲಿ: ಲಾಕ್​ಡೌನ್​ನಿಂದಾಗಿ ಸದ್ಯ ಮನೆಯಲ್ಲೇ ಬಂದಿಗಳಾಗಿರುವ ಉದ್ಯೋಗಿಗಳು, ಲಾಕ್​ಡೌನ್​ ತೆರೆದರೆ ಸಾಕು. ಕಚೇರಿಗೆ ಹೋಗಿ ಕೆಲಸ ಮಾಡಬಹುದು. 8 ತಾಸು ಕೆಲಸ ಮಾಡಿ ಬಂದು, ಎಂದಿನಂತೆ ಮೋಜು-ಮಸ್ತಿ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಇವರೆಲ್ಲರ ಲೆಕ್ಕಾಚಾರ ಉಲ್ಟಾ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಲಾಕ್​ಡೌನ್​ನಿಂದಾಗಿ ಸಾಕಷ್ಟು ಕಾರ್ಮಿಕರು, ದಿನಗೂಲಿ ನೌಕರರು ಸ್ವಂತ ಊರುಗಳಿಗೆ ತೆರಳಿದ್ದಾರೆ. ಲಾಕ್​ಡೌನ್​ ತೆರವಾದ ಬಳಿಕ ಇವರೆಲ್ಲರೂ ತಕ್ಷಣವೇ ಮರಳುವುದು ಅನುಮಾನ. ಹಾಗಾಗಿ ಕಾರ್ಮಿಕರ ಕೊರತೆ ಉಂಟಾಗುವ ಸಾಧ್ಯತೆ ಇದೆ. ಜತೆಗೆ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕಾಗಿರುವುದರಿಂದ, ಸರ್ಕಾರ ಇದೀಗ ಕೆಲಸದ ಅವಧಿಯನ್ನು 8 ಗಂಟೆಯ ಬದಲು 12 ಗಂಟೆಗೆ ಹೆಚ್ಚಿಸುವ ಮೂಲಕ ಕಾರ್ಮಿಕರ ಕೊರತೆ ಸಮಸ್ಯೆ ನೀಗಿಸಲು ನಿರ್ಧರಿಸಿದೆ. ಈ ಸಂಬಂಧ ಅದು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

ಉದ್ಯೋಗದಾತರ ಸಂಘಟನೆಗಳು ಮತ್ತು ಕೈಗಾರಿಕೋದ್ಯಮಿಗಳು ಕಾರ್ಮಿಕರ ಕೊರತೆ ನೀಗಿಸುವ ಉದ್ದೇಶದಿಂದ ಕೆಲಸದ ಅವಧಿಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದನ್ನು ಆಧರಿಸಿ, ಲಾಕ್​ಡೌನ್​ ತೆರವುಗೊಳಿಸಿದ ನಂತರದಲ್ಲಿ ಕೆಲಸದ ಅವಧಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರಾಜ್ಯ ಸರ್ಕಾರಗಳಿಗೆ ನಿರ್ಧಾರದ ಅಧಿಕಾರ: ಕೆಲಸದ ಅವಧಿಯನ್ನು 8ರಿಂದ 12 ತಾಸಿಗೆ ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಗುತ್ತಿದೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ವಾತಾವರಣವನ್ನು ಆಧರಿಸಿ ಕಾರ್ಮಿಕ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗುವ ನಿರ್ಧಾರವನ್ನು ಅನುಷ್ಠಾನಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಪ್ರದತ್ತಗೊಳಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net