

ಭದ್ರಾವತಿ: ಮಹಿಳೆಯರು ಒತ್ತಡದ ಕೆಲಸದ ನಡುವೆ ಆರೋಗ್ಯದ ಕಡೆಗೂ ಗಮನಹರಿಸಬೇಕು. ಇದಕ್ಕಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧಾ ಪಟೇಲ್ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಗುರುವಾರ ಚುಂಚಾದ್ರಿ ಮಹಿಳಾ ವೇದಿಕೆ, ಶಿವಮೊಗ್ಗ ನಾರಾಯಣ ಹೃದಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ಮ್ಯಾಮೋಗ್ರಫಿ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ವೈದ್ಯರ ಬಳಿ ಹೋಗಲು ಹಿಂಜರಿಯಬಾರದು. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದರು.
ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಆತಂಕಪಡುವ ಅಗತ್ಯವಿಲ್ಲ. ಆರಂಭದಲ್ಲಿಯೇ ತಪಾಸಣೆಗೆ ಒಳಪಟ್ಟು ಚಿಕಿತ್ಸೆ ಪಡೆದಲ್ಲಿ ಆರೋಗ್ಯಯುತ ಜೀವನ ನಡೆಸಬಹುದು. ಮಹಿಳೆಯರು ತಮ್ಮ ಸ್ವಾಸ್ಥವನ್ನು ತಾವೇ ಕಾಪಾಡಿಕೊಳ್ಳಬೇಕು. ಸಂಸಾರದ ಕಣ್ಣಾಗಿರುವ ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯ ಹಾಗೂ ಸಂತೋಷದಿಂದ ಇರಲು ಸಾಧ್ಯ. 40 ವರ್ಷ ದಾಟಿದ ಪ್ರತಿ ಮಹಿಳೆಯೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದು ತಿಳಿಸಿದರು.
ಡಾ. ಸ್ವಾತಿ ಮಾತನಾಡಿ, ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್‌ಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಬೇಗನೆ ಗುಣಮುಖರಾಗಲು ಸಾಧ್ಯ. ಸಾಕಷ್ಟು ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದ್ದು, ರೋಗ ಕಾಣಿಸಿಕೊಂಡ ಮಹಿಳೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಎಚ್.ಶಿವಕುಮಾರ್, ಕೂಡ್ಲಿಗೆರೆ ಹಾಲೇಶ್, ದುಷ್ಯಂತ್‌ರಾಜ್, ಗಿರೀಶ್, ಶಿಬಿರದ ಸಂಯೋಜಕ ರವಿ ಇತರರಿದ್ದರು.