

ಶಿರಾಳಕೊಪ್ಪ: ಕ್ಯಾನ್ಸರ್ ಒಂದು ಮಾರಕ ರೋಗ. ಕಾಯಿಲೆ ಬಂದರೆ ಉಳಿಯುವುದೇ ಕಷ್ಟ ಎಂಬ ದಿನಗಳು ದೂರವಾಗಿವೆ. ಇಂದು ರೋಗವನ್ನು ಪತ್ತೆಹಚ್ಚಲು ಆಧುನಿಕ ಸಾಧನಗಳು ಬಂದಿವೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ರೋಗ ನಿಯಂತ್ರಿಸಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಕಾರಿಪುರ ತಾಲೂಕು ಮುಖ್ಯಸ್ಥ ನಂಜುಂಡಿ ತಿಳಿಸಿದರು.
ಶಿರಾಳಕೊಪ್ಪದ ಕಾಳಿಕಾದೇವಿ ದೇವಾಲಯದಲ್ಲಿ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ, ಕಾಳಿಕಾಂಬಾ ವಿಶ್ವಕರ್ಮ ದೇವಸ್ಥಾನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆ, ಬಸವೇಶ್ವರ ಲ್ಯಾಬ್ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇಂದು ಜನರು ತಪಾಸಣೆ ಎಂದರೆ ಭಯಪಡುತ್ತಾರೆ. ನಾಗರಿಕರು ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವುದು ಉತ್ತಮ. ಆರಂಭಿಕ ಹಂತದಲ್ಲಿದ್ದರೆ ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿದೆ ಎಂದು ವೈದ್ಯರು ಹೇಳುತ್ತಾರೆ. ನಾವಾಗಿಯೇ ಭಯಪಟ್ಟು ತಪಾಸಣೆಗೆ ಹೋಗದಿರುವುದು ಅಪಾಯ ತಂದುಕೊಂಡಂತೆ. ಯಾವುದೇ ಖರ್ಚಿಲ್ಲದೆ ಮನೆಬಾಗಿಲಿಗೆ ಉಚಿತವಾಗಿ ತಪಾಸಣೆ ಮಾಡಲು ಬಂದಿರುವ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರ ಕಾರ್ಯ ಶ್ಲಾಘನೀಯ ಎಂದರು.
ಮಲೆನಾಡು ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ. ದೀಪಕ್ ಮಾತನಾಡಿ, ಇಂತಹ ಮುಂದುವರಿದ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಲಾಭ ಪಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.
ಐಎಂಎ ಶಿಕಾರಿಪುರ ತಾಲೂಕು ಅಧ್ಯಕ್ಷ ಡಾ. ಶ್ರೀನಿವಾಸ ಮಾತನಾಡಿ, ದೇವಸ್ಥಾನಗಳಲ್ಲಿ ಸಾಮಾಜಿಕ, ಧಾರ್ಮಿಕ ಚಟುವಟಿಕೆ ನಡೆಯುವುದು ವಾಡಿಕೆ. ಆದರೆ ನಾವು ಜಾತಿ, ಮತ ತಾರತಮ್ಯವಿಲ್ಲದೆ ಜನಸಾಮಾನ್ಯರಿಗೆ ದೇವಾಲಯದಲ್ಲಿ ಆರೋಗ್ಯ ಶಿಬಿರ ಆಯೋಜಿಸಿದ್ದೇವೆ. ಮನುಷ್ಯನ ಜೀವ ಉಳಿಸುವಾಗ ಜಾತಿ, ಮತ, ಬಡವ, ಶ್ರೀಮಂತ ಎಂಬ ತಾರತಮ್ಯ ಇರುವುದಿಲ್ಲ. ಎಲ್ಲರ ಜೀವವೂ ಅಮೂಲ್ಯವಾದುದು ಎಂದರು.
ಕಾಳಿಕಾಂಬಾ ವಿಶ್ವಕರ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಸಿ.ನಾಗರಾಜ್, ಡಾ. ಶಶಿಕಲಾ, ಧರ್ಮಸ್ಥಳ ಯೋಜನೆಯ ಅಮಿತಾ, ರಮೇಶ್ ಆಚಾರಿ, ರಾಘವೇಂದ್ರ, ನಿವೇದಿತಾ ಇತರರಿದ್ದರು.