

ಜೆರುಸಲೇಂ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಮನಕದಡುವ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಮಧ್ಯೆ ಹಮಾಸ್ ಉಗ್ರರು, ಗಾಯಗಳಿಂದ ಜರ್ಜರಿತಗೊಂಡ ಮಹಿಳೆಯೊಬ್ಬಳ ಬೆತ್ತಲೆ ದೇಹವನ್ನು ಪಿಕಪ್ ಟ್ರಕ್ನ ಹಿಂದೆ ಹಾಕಿಕೊಂಡು ಇಸ್ರೇಲ್ ಬೀದಿಗಳಲ್ಲಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆಯು ವರದಿಯಾಗಿದೆ.
ಮೆರವಣಿಗೆ ಮಾಡಿದ ದೇಹವು ಇಸ್ರೇಲಿ ಮಹಿಳಾ ಸೈನಿಕಳದ್ದು ಎಂದು ಹಮಾಸ್ ಆರಂಭದಲ್ಲಿ ಪ್ರತಿಪಾದಿಸಿತ್ತು ಎಂದು ನ್ಯೂಸ್ ಡಾಟ್ ಕಂ ಡಾಟ್ ಎಯು ಡಾಟ್ (news.com.au.) ವರದಿ ಮಾಡಿತ್ತು. ಆದರೆ, ಆ ದೇಹ ಶಾನಿ ಲೌಕ್ಳದ್ದು ಎಂಬುದನ್ನು ಆಕೆಯ ಸಹೋದರಿ ಆದಿ ಲೌಕ್ ಎಕ್ಸ್ನಲ್ಲಿ ಖಚಿತಪಡಿಸಿದ್ದಾರೆ. ಶಾನಿ ಲೌಕ್, ಜರ್ಮನ್ ಪ್ರಜೆಯಾಗಿದ್ದು, ಟ್ಯಾಟೂ ಕಲಾವಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ವೈಸ್ಗ್ರಾಡ್ 24 ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಶಾನಿ ಲೌಕ್ ತಾಯಿ ಮಾತನಾಡಿದ್ದು, ಮಗಳ ಗುರುತನ್ನು ಖಚಿತಪಡಿಸಿದ್ದಾರೆ. ಅಲ್ಲದೆ, ಆಕೆಯ ಇರುವಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಜನರ ಬಳಿ ಮನವಿ ಮಾಡಿದ್ದಾರೆ.
ಶಾನಿ ಸೋದರ ಸಂಬಂಧಿ ತೊಮಸಿನಾ ಪ್ರಕಾರ, ಶನಿವಾರ ಬೆಳಗ್ಗೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದಾಗಿನಿಂದ ಶಾನಿ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಳು. ಆಕೆಯ ಕುರಿತಾದ ಯಾವುದಾದರೂ ಪಾಸಿಟಿವ್ ನ್ಯೂಸ್ ಬರಬಹುದು ಅಂತಾ ಎದುರು ನೋಡುತ್ತಿದ್ದಾರೆ. ಶಾಂತಿಗಾಗಿ ಸಂಗೀತ ಉತ್ಸವ ಕಾರ್ಯಕ್ರಮಕ್ಕಾಗಿ ಶಾನಿ ಇಸ್ರೇಲ್ನಲ್ಲಿದ್ದಳು. ಇದೇ ಸಮಯದಲ್ಲಿ ದಾಳಿಯಾಗಿದ್ದು, ಇದೊಂದು ದುಸ್ವಪ್ನ ಎಂದು ತೊಮಸಿನಾ ನ್ಯೂಸ್ ಡಾಟ್ ಕಂ ಡಾಟ್ ಎಯು ಡಾಟ್ಗೆ ತಿಳಿಸಿದ್ದಾರೆ.
ಶಾನಿ ಭಾಗವಹಿಸಿದ್ದ ಸಂಗೀತೋತ್ಸವವು ಹಮಾಸ್ ಉಗ್ರಗಾಮಿಗಳ ದಾಳಿಗೆ ಒಳಗಾದ ಮೊದಲ ತಾಣಗಳಲ್ಲಿ ಒಂದು ಎಂದು ವರದಿಯಾಗಿದೆ. ಅಲ್ಲಿನ ಪರಿಸ್ಥಿತಿ ತುಂಬಾ ವಿಕೋಪವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಶಾನಿಯ ಕುಟುಂಬಸ್ಥರು ಕಾಯುತ್ತಿದ್ದಾರೆ.
ಶನಿವಾರ ಬೆಳಗ್ಗೆ ಇಸ್ರೇಲ್ ಮೇಲೆ ಹಮಾಸ್ ಉಗ್ರಗಾಮಿ ಗುಂಪು 5,000 ರಾಕೆಟ್‌ಗಳನ್ನು ಸಿಡಿಸುವುದರೊಂದಿಗೆ ಮೊದಲ ದಾಳಿಯನ್ನು ನಡೆಸಿತು. ಬಳಿಕ ಉಗ್ರರು ಇಸ್ರೇಲ್ ಒಳಗೆ ನುಸುಳಿದ್ದಾರೆ. ಮನೆ ಮನೆಗಳಿಗೆ ತೆರಳಿ ನಾಗರಿಕರ ಕಗ್ಗೊಲೆ ಮಾಡುತ್ತಿರುವ ಉಗ್ರರು ವಿದೇಶಿಯರನ್ನೂ ಸೆರೆ ಹಿಡಿದಿದ್ದಾರೆ. ಇಸ್ರೇಲ್‌ನಲ್ಲಿ ಏಳು ನೇಪಾಳಿಗಳು ಗಾಯಗೊಂಡಿದ್ದಾರೆ ಮತ್ತು 17 ಮಂದಿಯನ್ನು ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸದ್ಯದ ಮಾಹಿತಿ ಮೇರೆಗೆ ಇಸ್ರೇಲ್‌ನಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೆ, ಗಾಜಾ ಮೇಲಿನ ಇಸ್ರೇಲ್ ಪ್ರತಿದಾಳಿಗೆ 230ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಸ್ಥಳೀಯ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೇಸ್ಮೆಂಟ್ಗಳಲ್ಲಿ ಅಡಗಿಕೊಂಡಿದ್ದಾರೆ. ಎರಡೂ ಕಡೆಗಳಿಂದ ಒಟ್ಟು 500ಕ್ಕೂ ಹೆಚ್ಚು ಸಾವಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. (ಏಜೆನ್ಸೀಸ್)