More

    ಬಿಗ್​ಬಾಸ್ ಫೀವರ್ ಶುರು​: 10ನೇ ಸೀಸನ್​ನಲ್ಲಿ ಡೊಡ್ಮನೆ ಪ್ರವೇಶಿಸುವವರು ಯಾರು? ಇಲ್ಲಿದೆ ಸಂಭವನೀಯ ಪಟ್ಟಿ​…

    ಬೆಂಗಳೂರು: ಇಂದಿನಿಂದ ಎಲ್ಲರ ಮನೆಗಳಲ್ಲಿ ಮೂರು ತಿಂಗಳ ಕಾಲ “ಹೌದು ಸ್ವಾಮಿ” ಎಂಬ ಘೋಷಣೆ ಮತ್ತೆ ಮೊಳಗಲಿದೆ. ಹೌದು ಸ್ವಾಮಿ ಎಂಬ ಪದ ಕೇಳಿದರೆ ಸಾಕು ಥಟ್​ ಅಂತಾ ನೆನಪಾಗುವುದು ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​. ಈಗಾಗಲೇ ಯಶಸ್ವಿ 9 ಆವೃತ್ತಿಯನ್ನು ಮುಗಿಸಿರುವ ಬಿಗ್​ಬಾಸ್ ಶೋ 10ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡು ಇಂದಿನಿಂದ ಟಿವಿ ಪರದೆಯ ಮೇಲೆ ಲಗ್ಗೆ ಇಡಲು ಆಗಮಿಸುತ್ತಿದೆ. ಈ ಬಾರಿ ಸಮ್​ಥಿಂಗ್​ ಸ್ಪೆಷಲ್​ ಸಹ ಇರಲಿದೆ.

    ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್​ಷಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ ಪಡೆದುಕೊಂಡಿದೆ. ಈ ಶೋ ಮಾಮೂಲಿಯಂತೆ ಈ ಬಾರಿಯೂ ಕಲರ್ಸ್​ ಕನ್ನಡದಲ್ಲಿ ಮೂಡಿ ಬರಲಿದೆ. ಆದರೆ, ಒಂದೇ ಒಂದು ಬದಲಾವಣೆ ಏನೆಂದರೆ ಈ ಬಾರಿಯ ಪರಮೇಶ್ವರ್​ ಗುಂಡ್ಕಲ್​ ಅವರ ಬದಲಾಗಿ ಪ್ರಶಾಂತ್​ ನಾಯಕ್​ ಅವರ ನೇತೃತ್ವದಲ್ಲಿ ಈ ಶೋ ನಡೆಯಲಿದೆ. ಕಲರ್ಸ್​ ಕನ್ನಡ ಮುಖ್ಯಸ್ಥ ಸ್ಥಾನವನ್ನು ಪ್ರಶಾಂತ್​ ನಾಯಕ್​ ವಹಿಸಿಕೊಂಡಿದ್ದಾರೆ. ಎಂದಿನಂತೆ ಕಿಚ್ಚನದ್ದೇ ನಿರೂಪಣೆ ಇರಲಿದೆ.

    ಇಷ್ಟೆಲ್ಲ ಹೇಳಿದ ಬಳಿಕ ನಿಮ್ಮ ತಲೆಗೆ ಬರುವ ಮೊದಲ ಪ್ರಶ್ನೆಯೆಂದರೆ, ಈ ಬಾರಿ ಬಿಗ್​ಬಾಸ್​ನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದು. ಅದಕ್ಕೆ ಉತ್ತರ ಮುಂದಿದೆ ಓದಿ. ಈ ಬಾರಿ ಒಳ್ಳೊಳ್ಳೆ ಸ್ಪರ್ಧಿಗಳನ್ನು ದೊಡ್ಮನೆಯೊಳಗೆ ಕಳಹಿಸಲಿದೆ. ಈಗಾಗಲೇ ಓರ್ವ ಸ್ಪರ್ಧಿ ಖಚಿತವಾಗಿದೆ. ಯಾರು ಆ ಸ್ಪರ್ಧಿ ಅಂದರೆ ರಕ್ಷಿತ್​ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾದ ಮುಖ್ಯ ಪಾತ್ರಧಾರಿ ಚಾರ್ಲಿ ಶ್ವಾನ ದೊಡ್ಮನೆಗೆ ಪ್ರವೇಶ ಮಾಡಲಿದೆ. ಇದನ್ನು ಪ್ರಶಾಂತ್​ ನಾಯಕ್​ ಅವರೇ ಖಚಿತಪಡಿಸಿದ್ದಾರೆ. ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಕೆಲವರ ಹೆಸರು ಓಡಾಡುತ್ತಿದೆ. ವದಂತಿಗಳ ಪ್ರಕಾರ ಈ ಬಾರಿ ಬಿಗ್​ಬಾಸ್​ ಮನೆ ಪ್ರವೇಶಿಸಲಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ…

    ರಂಜನಿ ರಾಘವನ್​
    ರಂಜನಿ ರಾಘವನ್ ಓರ್ವ ಕಲಾವಿದೆ. ಅಲ್ಲದೆ, ಬರಗಾರ್ತಿಯೂ ಹೌದು. ಮಂಗಳ ಗೌರಿ ಮದುವ ಧಾರವಾಯಿಯಲ್ಲಿ ಮಂಗಳಗೌರಿ ಪಾತ್ರದ ಮೂಲಕ ಕನ್ನಡಿಗರಲ್ಲಿ ಮನೆ ಮಾಡಿದ ರಂಜಿನಿ, ಜಡೇಶ್ ಕುಮಾರ್ ಹಂಪಿ ನಿರ್ದೇಶನ ರಾಜಹಂಸ ಚಿತ್ರದ ಮೂಲಕ ಕಿರಿತೆರೆಯಿಂದ ಬೆಳ್ಳಿತೆರೆಗೆ ಪ್ರವೇಶಿಸಿದರು. ಇದೀಗ ಬರವಣಿಗೆಯಲ್ಲೂ ರಂಜನಿ ಗುರುತಿಸಿಕೊಂಡಿದ್ದು, ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಸುವವರಲ್ಲಿ ಇವರು ಒಬ್ಬರು ಎಂದು ಹೇಳಲಾಗಿದೆ.

    ರೂಪಾ ರಾಯಪ್ಪ
    ರೂಪಾ ರಾಯಪ್ಪ ಅವರು ನಟಿ ಮತ್ತು ರೂಪದರ್ಶಿ. ಪ್ರಾಥಮಿಕವಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಯಶ್ ಅಭಿನಯದ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಕೆಜಿಎಫ್’ನಲ್ಲಿ ತಮ್ಮ ನಟನೆಯ ಮೂಲಕ ಮೊದಲ ಬಾರಿಗೆ ಗುರುತಿಸಿಕೊಂಡರು. ಚಿತ್ರದಲ್ಲಿ ಗುಲಾಮಳಾಗಿ ಅವರ ಪಾತ್ರವು ಗಮನ ಸೆಳೆಯಿತು ಮತ್ತು ಉದ್ಯಮದಲ್ಲಿ ಹೆಚ್ಚಿನ ಅವಕಾಶಗಳಿಗೆ ಬಾಗಿಲು ಸಹ ತೆರೆಯಿತು.

    ನಮ್ರತಾ ಗೌಡ
    ನಮ್ರತಾ ಗೌಡ ಸಹ ಕಿರುತೆರೆ ಕಲಾವಿದೆ. ಸ್ಟಾರ್​ ಸುವರ್ಣದಲ್ಲಿ ಪ್ರದರ್ಶನಗೊಂಡು ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ 2011ರಿಂದ ಕನ್ನಡ ಕಿರಿತೆರೆ ಲೋಕದ ಪ್ರಯಾಣವನ್ನು ಆರಂಭಿಸಿದರು. ನಮ್ರತಾ ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಮಂಗಳ ಗೌರಿ ಮದುವೆ ಮತ್ತು ನಾಗಿನಿ 2 ತುಂಬಾ ಖ್ಯಾತಿ ಪಡೆದುಕೊಂಡಿವೆ. 2019 ರಲ್ಲಿ ನಮ್ರತಾ ಅವರು ‘ತಕಡಿಮಿತಾ’ ರಿಯಾಲಿಟಿ ಶೋನಲ್ಲಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿದರು ಮತ್ತು ಯಶಸ್ವಿಯಾಗಿ ಟಾಪ್ 5ರ ಸ್ಥಾನವನ್ನು ತಲುಪಿದರು. ಅಲ್ಲದೆ, ನಮ್ರತಾ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುತ್ತಾರೆ. ತಮ್ಮ ಮಾದಕ ಫೋಟೋಗಳಿಂದ ಆಗಾಗ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

    ನೀನಾದ್​ ಹರಿತ್ಸ
    ನೀನಾದ್​ ಹರಿತ್ಸ ಸಹ ಕನ್ನಡ ಕಲಾವಿದ ಮತ್ತು ಫಿಟ್ನೆಸ್​ ಫ್ರೀಕ್​. ಜೀ ಕನ್ನಡದಲ್ಲಿ ಮೂಡಿಬಂದ ನಾಗಿನಿ 2 ಧಾರಾವಾಹಿಯ ಮೂಲಕ ನಿನಾದ್​ ಹರಿತ್ಸ ಪ್ರಧಾನವಾಗಿ ಗುರುತಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ನೀನಾದ್​ ಹರಿತ್ಸ ಬಿಗ್​ಬಾಸ್​ಗೆ ಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೆ ಉತ್ತರ ಇಂದು ಸಂಜೆ ಗೊತ್ತಾಗಲಿದೆ.

    ರಕ್ಷಕ್​ ಬುಲೆಟ್
    ರಕ್ಷಕ್​ ಬುಲೆಟ್​ ಅವರು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಬುಲೆಟ್​ ಪ್ರಕಾಶ್​ ಅವರ ಸುಪುತ್ರ. ಅಲ್ಲದೆ, ಸೋಶಿಯಲ್​ ಮೀಡಿಯಾ ಇನ್​ಫ್ಲ್ಯುಯೆನ್ಸರ್​ ಕೂಡ ಹೌದು. ಕಳೆದ ವರ್ಷ ಬಿಡುಗಡೆಯಾದ ನಟ ಶರಣ್​ ಅಭಿನಯದ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

    ರಾಜೇಶ್​ ಧ್ರುವ
    ರಾಜೇಶ್​ ಧ್ರುವ ಕಿರುತೆರೆ ಕಲಾವಿದ. ಟಿವಿ ಲೋಕದಲ್ಲಿ ತುಂಬಾ ಸದ್ದು ಮಾಡಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ರಾಜೇಶ್​ ಧ್ರುವ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೆ, ಡ್ಯಾನ್ಸ್​ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಇದರ ನಡುವೆ ಕೌಟುಂಬಿಕ ಕಲಹದಿಂದಾಗಿ ವಿವಾದಕ್ಕೂ ಗುರಿಯಾಗಿದ್ದರು. ಶ್ರೀ ಬಾಲಾಜಿ ಸ್ಟುಡಿಯೋ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇವರು ಕೂಡ ಈ ಬಾರಿಯ ಬಿಗ್​ಬಾಸ್​ ಸ್ಪರ್ಧಿ ಎಂದು ಹೇಳಲಾಗಿದೆ.

    ಸುಕ್ರುತ ನಾಗ್​
    ಇವರು ಕೂಡ ಕಿರುತೆರೆ ಕಲಾವಿದೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸುಕ್ರುತಾ ಅವರ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿದ್ದ ಇತ್ತೀಚಗಷ್ಟೇ ಮುಗಿದ ಲಕ್ಷಣ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ಇವರು ಕೂಡ ದೊಡ್ಮನೆ ಕದ ತೆರೆಯಲಿದ್ದಾರೆ.

    ಭವ್ಯ ಗೌಡ
    ಭವ್ಯ ಗೌಡ ಕೂಡ ಕಿರುತೆರೆ ಕಲಾವಿದೆ ಮತ್ತು ರೂಪದರ್ಶಿ. ಭವ್ಯಾ ಅವರು 2009 ರಲ್ಲಿ ಮಿಸ್ ಇಂಗ್ಲೆಂಡ್ ಅರ್ಥ್ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದರು. ಹೆಚ್ಚುವರಿಯಾಗಿ 2002ರಲ್ಲಿ ಮಿಸ್ ಇಂಡಿಯಾ ಪರ್ಸನಾಲಿಟಿ ಟೈಟಲ್​ ಸಹ ಹೊಂದಿದ್ದರು. ಏಷ್ಯಾ ಪೆಸಿಫಿಕ್ ಪ್ರದೇಶದ 2010ರ ಮಿಸ್ ಕಾಮನ್ವೆಲ್ತ್ ಇಂಟರ್ನ್ಯಾಷನಲ್ ಅಂತಿಮ ಸ್ಪರ್ಧಿಯಾಗಿದ್ದರು. ಕಲರ್ಸ್​ ಕನ್ನಡದ ಗೀತಾ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದರು. ಅಲ್ಲದೆ, ಡಿಯರ್​ ಕಣ್ಮಣಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದಾರೆ.

    ಉಳಿದಂತೆ ನ್ಯೂಸ್​ ಆ್ಯಂಕರ್​ ಹರೀಶ್​ ನಾಗರಾಜ್​, ಉರಗ ರಕ್ಷಕ ಸ್ನೇಕ್ ಶ್ಯಾಮ್​, ಗಾಯಕಿ ಆಶಾ ಭಟ್​, ತೃತೀಯ ಲಿಂಗಿ ನೀತು, ರ್ಯಾಪರ್​ ಇಶಾನಿ, ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಕಾಫಿ ನಾಡು ಚಂದು, ಮಜಾಭಾರತ ಖ್ಯಾತಿಯ ಚಂದ್ರಪ್ರಭಾ, ಹಾಸ್ಯನಟ ಪ್ರಕಾಶ್​ ತುಮಿನಾಡ್​, ಕ್ರಿಕೆಟಿಗ್​ ವಿನಯ್​ ಕುಮಾರ್​ ಮತ್ತು ನಟ ಕೋಮಲ್​ ಅವರ ಹೆಸರು ಕೂಡ ಚಾಲ್ತಿಯಲ್ಲಿದ್ದು, ಅಂತಿಮವಾಗಿ ಯಾರು ಮನೆಯ ಒಳಗೆ ಪ್ರವೇಶಿಸುತ್ತಾರೆ ಎಂಬುದು ಇಂದು ರಾತ್ರಿ ಅಧಿಕೃತವಾಗಿ ಗೊತ್ತಾಗಲಿದೆ. ಬಿಗ್​ಬಾಸ್​ ಗ್ರ್ಯಾಂಡ್​ ಪ್ರೀಮಿಯರ್​ ಇಂದು ಸಂಜೆ ಆರು ಗಂಟೆಗೆ ಶುರುವಾಗಲಿದೆ.

    Success Story; ಟಾಯ್ಲೆಟ್ ಕ್ಲೀನ್ ಮಾಡಿದ್ದ ವ್ಯಕ್ತಿ ಈಗ ಚಿತ್ರವೊಂದಕ್ಕೆ 100 ಕೋಟಿ ರೂ. ಸಂಭಾವನೆ ಪಡೆಯುವ ಸೂಪರ್‌ಸ್ಟಾರ್‌

    ಮನ್‌ಮುಲ್‌ ತುಪ್ಪ ಹಾಗೂ ಖೋವಾ ತಯಾರಿಕಾ ಘಟಕಕ್ಕೆ ಬೆಂಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts