

ಚೆನ್ನೈ: ಪ್ರೀತಿಗೆ ಯಾವುದೇ ಮಿತಿ ಅಥವಾ ಗಡಿಗಳಿಲ್ಲ. ಪ್ರೀತಿ ಎಂಬುದು ಜಾತಿ, ಧರ್ಮ, ಬಣ್ಣ, ಭಾಷೆ, ವಯಸ್ಸು, ಗಡಿ ಹಾಗೂ ಅಂತಸ್ತು ಎಲ್ಲವನ್ನು ( Love Marriage ) ಮೀರಿದ್ದು ಎನ್ನುತ್ತಾರೆ.
ತನ್ನ ಪ್ರೇಮಿಯನ್ನು ಮದುವೆಯಾಗಲು ದೇಶ ಬಿಟ್ಟು ಹೋಗುವವರೂ ಇದ್ದಾರೆ, ವಿದೇಶದಿಂದ ಬಂದವರೂ ಇದ್ದಾರೆ. ಪ್ರೀತಿ ಒಂದು ಮಧುರ ಭಾವನೆ. ಪ್ರೀತಿ ಎಂದರೆ ಎರಡು ಮನಸ್ಸುಗಳ ಮಿಲನ. ಪ್ರೀತಿಸಿದವರನ್ನು ಪಡೆದುಕೊಳ್ಳಲು ಕೆಲವರು ಏನು ಬೇಕಾದರೂ ಮಾಡುತ್ತಾರೆ. ಕೆಲವರು ಹಿರಿಯರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಎರಡೂ ಮನೆಯವರನ್ನು ಒಪ್ಪಿಸಿ, ಪ್ರೀತಿಯಲ್ಲಿ ಗೆದ್ದು ಮದುವೆಯಾಗಿದ್ದಾರೆ.
ತಾಜಾ ಸಂಗತಿ ಏನೆಂದರೆ, ತಮಿಳುನಾಡು ಮೂಲದ ಯುವಕನೊಬ್ಬ, ಜರ್ಮನ್ ಮೂಲದ ಯುವತಿಯನ್ನು ಹಿಂದು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಜರ್ಮನ್ ಯುವತಿ ಸಾಗರಗಳನ್ನು ದಾಟಿ ಬಂದು ತನ್ನ ಪ್ರಿಯಕರನನ್ನು ವರಿಸಿದ್ದಾಳೆ. ವರ ವಿಘ್ನೇಶ್ವರನ್, ತಂಜಾವೂರಿನ ಭೂತಲೂರ್ ಕೂಡಂಪಟ್ಟಿ ಗ್ರಾಮದವರು. ವಧು ವಿಲಿನಾ ಬರ್ಗೆನ್ ಜರ್ಮನಿಯವರು. ಇಬ್ಬರೂ 10 ವರ್ಷಗಳಿಂದ ಜರ್ಮನಿಯ ಐಟಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪರಿಚಯವಾಯಿತು. ಅದೇ ಪರಿಚಯ ಸ್ನೇಹಕ್ಕೆ ತಿರುಗಿತು. ಕೊನೆಗೆ ಇಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಯಿತು. ಇದಾದ ನಂತರ, ಅವರಿಬ್ಬರು ಜೀವನಪೂರ್ತಿ ಒಟ್ಟಿಗೆ ಇರಲು ಮದುವೆ ನಿರ್ಧಾರಕ್ಕೆ ಬಂದರು. ಇದಾದ ಬಳಿಕ ಅವರಿಬ್ಬರು ತಮ್ಮ ತಮ್ಮ ಪಾಲಕರನ್ನು ಒಪ್ಪಿಸಿದರು. ತಂಜಾವೂರಿನಲ್ಲಿ ತಮಿಳು ಆಚರಣೆಗಳ ಪ್ರಕಾರ ಭರ್ಜರಿಯಾಗಿ ವಿವಾಹವಾದರು.
ವಧು ವಿದೇಶಿಯಾಗಿದ್ದರೂ, ಸಾಂಪ್ರದಾಯಿಕ ಪದ್ಧತಿಯ ಪ್ರಕಾರ ಕೈಗಳಿಗೆ ಗೋರಂಟಿ ಮತ್ತು ರೇಷ್ಮೆ ಸೀರೆಯೊಂದಿಗೆ ವಿವಾಹ ಸಮಾರಂಭದಲ್ಲಿ ಮಿಂಚಿದರು. ತಮಿಳು ಸಂಪ್ರದಾಯದಂತೆ ನಾದಸ್ವರದ ಶಬ್ದದೊಂದಿಗೆ ವಿವಾಹ ಸಮಾರಂಭ ನಡೆಯಿತು. ವಿದೇಶಗಳಿಂದ ಬಂದ ಅತಿಥಿಗಳು ಹಾಗೂ ವಧು-ವರರ ಸಂಬಂಧಿಕರು ಮತ್ತು ಸ್ನೇಹಿತರು ನವದಂಪತಿಗೆ ಶುಭ ಹಾರೈಸಿದರು.
ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಜರ್ಮನ್ ಪ್ರಜೆಗಳು ಸಹ ತಮಿಳುನಾಡಿನ ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿದ್ದರು ಎಂಬುದು ಗಮನಾರ್ಹ. ಈ ಹಿಂದೆಯು ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಯುವತಿಯರು ಭಾರತದ ಯುವಕರನ್ನು ಮದುವೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. (ಏಜೆನ್ಸೀಸ್)