

ಮೆಕ್ಸಿಕೋ: ಇಡೀ ಮಹಿಳಾ ಸಮುದಾಯವನ್ನು ಆಘಾತಕ್ಕೆ ದೂಡುವಂತಹ ಭಯಾನಕ ಘಟನೆಯೊಂದು ಉತ್ತರ ಅಮೆರಿಕದ ಮೆಕ್ಸಿಕೋ ದೇಶದಲ್ಲಿ ನಡೆದಿದೆ. ಅಲ್ಲಿನ ಅಧ್ಯಕ್ಷರ ( Mexican President ) ಮೇಲೆ ಜನನಿಬಿಡ ರಸ್ತೆಯಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಲಾಗಿದ್ದು, ಆರೋಪಿಯನ್ನು ತಕ್ಷಣ ಬಂಧಿಸಲಾಗಿದೆ. ಅಧಿಕಾರದ ಉನ್ನತ ಸ್ಥಾನದಲ್ಲಿರುವ ಪ್ರಭಾವಿಗಳಿಗೆ ಈ ರೀತಿ ಆದರೆ, ಜನ ಸಾಮಾನ್ಯರ ಗತಿ ಏನು ಎಂಬ ಕಳವಳವನ್ನು ಈ ಘಟನೆ ಹುಟ್ಟುಹಾಕಿದೆ.
ಅಷ್ಟಕ್ಕೂ ನಡೆದಿದ್ದೇನು ಅಂತ ವಿವರವಾಗಿ ತಿಳಿಯಬೇಕಾದರೆ, ಮುಂದೆ ಓದಿ. ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗಿರುವ ಕ್ಲೌಡಿಯಾ ಶೀನ್‌ಬಾಮ್ ಅವರು ಮಂಗಳವಾರ (ನ.04) ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಾರ್ವಜನಿಕರೊಂದಿಗೆ ಮಾತನಾಡುವಾಗ ಹಿಂದಿನಿಂದ ಬಂದ ಓರ್ವ ವ್ಯಕ್ತಿ, ಅಧ್ಯಕ್ಷೆಯ ಮೈಮೇಲೆ ಕೈ ಹಾಕಿ ಚುಂಬಿಸಲು ಪ್ರಯತ್ನಿಸಿದನು.
ಇದಿಷ್ಟೇ ಅಲ್ಲದೆ, ಅಧ್ಯಕ್ಷೆಯ ಎದೆಯನ್ನು ಮುಟ್ಟಲು ಪ್ರಯತ್ನಿಸಿದನು. ತಡವಾಗಿ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿಗಳು ಆತನನ್ನು ತಡೆದರು ಮತ್ತು ತಮ್ಮ ವಶಕ್ಕೆ ಪಡೆದುಕೊಂಡರು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಎಲ್ಲ ಅಧಿಕಾರವನ್ನು ಹೊಂದಿರುವ ಪ್ರಭಾವಿ ಮಹಿಳೆಗೆ ಈ ರೀತಿ ಆದರೆ, ಸಾಮಾನ್ಯ ಮಹಿಳೆಯ ಗತಿ ಏನು ಎಂದು ಅನೇಕ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಅಧ್ಯಕ್ಷೆ ಶೀನ್‌ಬಾಮ್, ಆತ ಕುಡಿದ ಮತ್ತಿನಲ್ಲಿ ಕಿರುಕುಳ ನೀಡಲು ಪ್ರಯತ್ನಿಸಿದ. ಈ ಒಂದು ಘಟನೆ ಎಲ್ಲ ಮಹಿಳೆಯರ ಮೇಲೆ ನಡೆದ ಹಲ್ಲೆ. ಒಬ್ಬ ಮಹಿಳೆಯಾಗಿ ನಾನು ಅನುಭವಿಸಿದ ಈ ಅನುಭವ, ನಮ್ಮ ದೇಶದ ಎಲ್ಲಾ ಮಹಿಳೆಯರು ಅನುಭವಿಸುವ ಅನುಭವ ಎಂದು ಹೇಳಿದರು. ಅಲ್ಲದೆ, ಮಹಿಳೆಯ ಖಾಸಗಿತನವನ್ನು ಉಲ್ಲಂಘಿಸುವ ಹಕ್ಕು ಯಾವುದೇ ಪುರುಷನಿಗಿಲ್ಲ. ಹೀಗಾಗಿ ನಾನು, ಆತನ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ಶೀನ್‌ಬಾಮ್ ಹೇಳಿದ್ದಾರೆ.
ದೂರಿನ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದ್ದು, ಈ ಬಗ್ಗೆ ಮೆಕ್ಸಿಕೋ ನಗರದ ಮೇಯರ್ ಕ್ಲಾರಾ ಬ್ರೂಗಾಡಾ ಮಾತನಾಗಿದ್ದು, ಆ ವ್ಯಕ್ತಿಯನ್ನು ರಾತ್ರೋರಾತ್ರಿ ಬಂಧಿಸಲಾಯಿತು ಮತ್ತು ಆತ ಲೈಂಗಿಕ ಅಪರಾಧಗಳ ತನಿಖಾ ಘಟಕದಲ್ಲಿ ಬಂಧನದಲ್ಲಿದ್ದಾನೆ ಎಂದು ತಿಳಿಸಿದ್ದಾರೆ.
ಇನ್ನು ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿಗಳು ತಡವಾಗಿ ಪ್ರತಿಕ್ರಿಯೆ ನೀಡಿರುವುದಕ್ಕೂ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್)