ಗಮನ ಸೆಳೆಯುತ್ತಿವೆ ಗೌರಿ-ಗಣಪತಿ

ಗಮನ ಸೆಳೆಯುತ್ತಿವೆ ಗೌರಿ-ಗಣಪತಿ
Published on

ಕೆ.ಆರ್.ಪ್ರಸಿನ್ ಹಾಸನ

ನಗರದ ಮಹಾವೀರ ವೃತ್ತ ಹಾಗೂ ಹೊಸ ಬಸ್ ನಿಲ್ದಾಣ ಬಳಿ ವಿವಿಧ ಮಾದರಿಯ ಮಣ್ಣಿನ ಗೌರಿ-ಗಣಪತಿ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ.

ರಾಜ್ಯದ ವಿವಿಧ ಭಾಗದಿಂದ ಖರೀದಿಸಿ ತಂದಿರುವ ಆಕರ್ಷಕ ಗಣಪತಿ ಮೂರ್ತಿಗಳು ಮಾರಾಟಕ್ಕೆ ಇಡಲಾಗಿದೆ. ಹಂಸದ ಮೇಲೆ ಕೂತಿರುವ ಗಣಪ, ಆನೆ ಮೇಲೆ ಕೂತಿರುವ ಗಣಪ, ರಾಜಸ್ಥಾನದ ಸ್ಪೆಷಲ್ ಗಣಪ, ಶಾಂತಮೂರ್ತಿ ಗಣಪ, ಕಮಲದ ಮೇಲೆ ಕುಳಿತಿರುವ, ಸಿಂಹದ ಮೇಲೆ, ಶಿವನ ಜತೆ, ನವೀಲು ಮೇಲೆ ಕುಳಿತಿರುವ ಗಣಪತಿ ಮೂರ್ತಿಗಳು ಗಮನ ಸೆಳೆಯುತ್ತಿವೆ.

ಜಿಲ್ಲಾಡಳಿತದ ನಿರ್ದೇಶನದಂತೆ ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಯನ್ನು ಮಾತ್ರ ಮಾರಾಟಕ್ಕೆ ಇಡಲಾಗಿದೆ.

ಬೆಂಗಳೂರು, ಆಂಧ್ರಪ್ರದೇಶ, ಹೈದರಾಬಾದ್, ವಿಜಯಪುರ, ಚನ್ನರಾಯಪಟ್ಟಣ, ರಾಮಸಾಗರ ಸೇರಿದಂತೆ ಸ್ಥಳೀಯವಾಗಿ ತಯಾರಿಸಿದ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. 2 ಸಾವಿರ ರೂ. ಗಳಿಂದ 80 ಸಾವಿರ ರೂ. ಬೆಲೆವರೆಗೆ ಗಣಪತಿ ಮೂರ್ತಿಗಳು ಮಾರಾಟಕ್ಕೆ ಇಡಲಾಗಿದೆ. ಗ್ರಾಹಕರನ್ನು ಸೆಳೆಯಲು ವರ್ತಕರು ತನ್ನದೇ ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ. ಮಹಾವೀರ ವೃತ್ತ ಹಾಗೂ ಹೊಸ ಬಸ್ ನಿಲ್ದಾಣ ಬಳಿ ಟೆಂಟ್‌ಗಳನ್ನು ಹಾಕಿಕೊಂಡು ಎರಡು ಮೂರು ದಿನಗಳಿಂದ ಗಣಪತಿ ಮೂರ್ತಿಯನ್ನು ಮಾರಾಟಕ್ಕೆ ಇಡಲಾಗಿದೆ.

ಮಣ್ಣು, ಗೆಣಸಿನ ಹಾಗೂ ಪೇಪರ್ ಪೌಡರ್ ಬಳಸಿ ಹಗುರವಾದ ಪರಿಸರಸ್ನೇಹಿ ಗಣಪತಿಮೂರ್ತಿ ತಯಾರು ಮಾಡಲಾಗಿದೆ. 3 ಅಡಿಯ ಮಣ್ಣಿನ ಗಣಪತಿಗೆ 6 ಸಾವಿರ ರೂ., 4 ಅಡಿಯ ಗಣಪತಿ ಮೂರ್ತಿಗೆ 8 ಸಾವಿರ ರೂ., 5 ಅಡಿಯ ಮೂರ್ತಿಗೆ 10ರಿಂದ 15 ಸಾವಿರ ರೂ., 6 ಅಡಿಯ ಗಣಪತಿ ಮೂರ್ತಿಗೆ 15ರಿಂದ 16 ಸಾವಿರ ರೂ. ಬೆಲೆ ನಿಗದಿ ಮಾಡಲಾಗಿದೆ. ದೊಡ್ಡ ಮೂರ್ತಿಗಳಿಗೆ 50 ಸಾವಿರ ರೂ.ಕ್ಕೂ ಅಧಿಕ ಬೆಲೆ ನಿಗದಿ ಮಾಡಲಾಗಿದೆ.

ಪೆಂಡಾಲ್‌ಗಳಿಗೆ ಪಿಒಪಿ ಕ್ರೇಜ್

ಇತ್ತೀಚಿನ ದಿನಗಳಲ್ಲಿ ಗಣಪತಿ ಕೂರಿಸುವ ಸಮಿತಿಗಳು ಸ್ಪರ್ಧೆಗೆ ಬಿದ್ದು ಪಿಒಪಿ ಗಣಪತಿ ಮೊರೆ ಹೋಗುತ್ತಿವೆ ಎನ್ನುತ್ತಾರೆ ವರ್ತಕ ರಂಜಿತ್. ಪಿಒಪಿ ಗಣಪತಿಗಳು ಹಗುರವಾಗಿರುವ ಜತೆಗೆ ಆಕರ್ಷಕ ವಿನ್ಯಾಸ ನೀಡಬಹುದಾಗಿದೆ. ಅಲ್ಲದೆ 16 ಅಡಿ ಹಾಗೂ ಅದಕ್ಕೂ ಹೆಚ್ಚು ಎತ್ತರದ ಗಣಪತಿ ಕೂರಿಸುವ ಮೂಲಕ ಇತರ ಸಮಿತಿಗಳ ಜತೆ ಸ್ಪರ್ಧೆಯ ಸಲುವಾಗಿ ಗಣಪತಿ ಸಮಿತಿಗಳು ಪಿಒಪಿ ಗಣಪತಿ ಕಡೆ ಗಮನ ಸೆಳೆಯುತ್ತಿವೆ. ಇದರಿಂದ ಮಣ್ಣಿನ ಮೂರ್ತಿಗೆ ಬೇಡಿಕೆ ಕಡಿಮೆ ಇದೆ ಎನ್ನುತ್ತಾರೆ ರಂಜಿತ್.

ಪ್ರತಿಷ್ಠಾಪನೆಗೂ ಅವಕಾಶ ನೀಡದಿರಲಿ

ಜಿಲ್ಲಾಡಳಿತದಿಂದ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಮಾರಾಟ ಕಂಡು ಬಂದಲ್ಲಿ ದಂಡ ವಿಧಿಸುವ ನಿರ್ದೇಶನ ನೀಡಲಾಗಿದೆ. ಆದರೆ ಕೆಲವು ಗಣಪತಿ ಸಮಿತಿಗಳು ನೇರವಾಗಿ ತಮ್ಮ ಶೆಡ್‌ಗಳಿಗೆ ಗಣಪತಿ ಮೂರ್ತಿಯನ್ನು ತರಿಸಿಕೊಂಡು ಪ್ರತಿಷ್ಠಾಪಿಸಲಾಗುತ್ತಿದೆ. ಇದರಿಂದ ನಾವು ನ್ಯಾಯಯುತವಾಗಿ ಮಾರಾಟ ಮಾಡುವ ವರ್ತಕರಿಗೆ ತೊಂದರೆಯಾಗುತ್ತಿದೆ. ಪಿಒಪಿ ಗಣಪತಿ ಮೂರ್ತಿ ಮಾರಾಟ ಮಾಡಲು ಅವಕಾಶ ನೀಡದಿದ್ದ ಮೇಲೆ ಪಿಒಪಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೂ ಅವಕಾಶ ನೀಡಬಾರದು ಎಂದು ಬೂವಹಳ್ಳಿಯ ವರ್ತಕ ಪ್ರವೀಣ್ ಒತ್ತಾಯಿಸಿದರು.

ಮಣ್ಣಿನ ಗಣಪತಿ ಮಾಡುವ ಶೆಡ್‌ಗಳಿಂದ ನಗರ ಪಾಲಿಕೆಯಿಂದ ಶುಲ್ಕ ವಸೂಲಿ ಮಾಡಲಾಗುತ್ತದೆ. ಪಿಒಪಿ ಗಣಪತಿ ಮಾರಾಟ ಮಾಡುವವರು ನೇರವಾಗಿ ಶೆಡ್‌ಗಳಿಗೆ ಮೂರ್ತಿಯನ್ನು ತಲುಪಿಸುತ್ತಿದ್ದಾರೆ. ಈ ಬಾರಿ ಶುಲ್ಕ ವಸೂಲಿ ಮಾಡಲು ಬಂದ ಸಂದರ್ಭ ಪ್ರಶ್ನಿಸಲಾಗುವುದು ಎಂದರು.

ಆರು ತಿಂಗಳಿನಿಂದ ಸಕಲೇಶಪುರ ಭಾಗದಲ್ಲಿ ಸ್ಥಳೀಯವಾಗಿ ಸಿಗುವ ಮಣ್ಣನ್ನು ಬಳಸಿ ತಯಾರಿಸಿದ ಗೌರಿ-ಗಣಪತಿ ಮೂರ್ತಿಯನ್ನು ಮಾರಾಟಕ್ಕೆ ತರಲಾಗಿದೆ. ಸುಮಾರು 10 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ. ಕೆಲಸಗಾರರ ಸಂಬಳ ಸೇರಿದಂತೆ ಇನ್ನಿತರ ವೆಚ್ಚ ಸೇರಿ 2 ಲಕ್ಷ ರೂ. ಅಧಿಕ ಖರ್ಚು ಮಾಡಿ ಮೂರ್ತಿ ತಯಾರು ಮಾಡಲಾಗಿದೆ. ಇದೂವರೆಗೆ ಮೂರು ಗಣಪತಿ ಮೂರ್ತಿಗಳು ಮಾರಾಟವಾಗಿವೆ. ನಾಳೆ ನಾಡಿದ್ದು, ವ್ಯಾಪಾರವಾಗುವ ನಿರೀಕ್ಷೆ ಇದೆ.

ರಂಜಿತ್

ವರ್ತಕ, ಸಕಲೇಶಪುರ

ರಾಮಸಂದ್ರದಿಂದ ಪರಿಸರಸ್ನೇಹಿ ಗಣಪತಿ ಮೂರ್ತಿ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ. 3 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ಟೆಂಟ್, ಶುಲ್ಕ ಸೇರಿದಂತೆ ಸಾಕಷ್ಟು ಖರ್ಚು ಬರುತ್ತದೆ. 50 ಸಾವಿರ ರೂ. ಆದರೂ ಉಳಿಯಬೇಕು. ಕಳೆದ ಬಾರಿ ತಂದ ಗಣಪತಿ ಮೂರ್ತಿಗಳು ಹಾಗೆ ಉಳಿದವು. ಗೋಡೋನ್ ವ್ಯವಸ್ಥೆ ಇದ್ದರೆ ಸಮಸ್ಯೆ ಇಲ್ಲ.

ವೆಂಕಟೇಶ್ ಆಚಾರಿ

ವರ್ತಕ

ಹಲವು ವರ್ಷಗಳಿಂದ ಗಣಪತಿ ಮೂರ್ತಿ ಮಾರಾಟ ಮಾಡಿಕೊಂಡು ಬಂದಿದ್ದೇವೆ. ಈಗಾಗಲೇ 60 ಗಣಪತಿ ಮೂರ್ತಿಗಳು ಬುಕ್ ಆಗಿವೆ. 70ರಿಂದ 80 ಗಣಪತಿ ಮೂರ್ತಿಗಳು ಮಾರಾಟವಾಗುವ ನಿರೀಕ್ಷೆ ಇದೆ. ಪೇಪರ್ ಹಾಗೂ ಗೆಣಸಿನ ಪುಡಿ ಬಳಸಿ ತಯಾರಿಸಿದ ಗಣಪತಿ ಮೂರ್ತಿ ಮಾರಾಟ ಮಾಡಲಾಗುತ್ತಿದೆ.

ಪ್ರವೀಣ್ ವರ್ತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net