ಮಂಗಳೂರಿನೆಲ್ಲೆಡೆ ತ್ಯಾಜ್ಯ....ತ್ಯಾಜ್ಯ

ಕೆಪಿಟಿಯಿಂದ ಸಂಕೈಗುಡ್ಡ ರಸ್ತೆಗೆ ಸಂಚರಿಸುವ ಮುಖ್ಯ ರಸ್ತೆಯ ಮುಂಭಾಗ ಕಳೆದ 1 ವಾರದಿಂದ ಟನ್‌ಗಟ್ಟಲೆ ತ್ಯಾಜ್ಯ ರಾಶಿಬಿದಿದೆ.
ಕೆಪಿಟಿಯಿಂದ ಸಂಕೈಗುಡ್ಡ ರಸ್ತೆಗೆ ಸಂಚರಿಸುವ ಮುಖ್ಯ ರಸ್ತೆಯ ಮುಂಭಾಗ ಕಳೆದ 1 ವಾರದಿಂದ ಟನ್‌ಗಟ್ಟಲೆ ತ್ಯಾಜ್ಯ ರಾಶಿಬಿದಿದೆ.
Published on
ಮಂಗಳೂರು: ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯ ಮಂಗಳೂರು ನಗರವೀಗ ಕಸದ ನಗರಿಯಾಗಿ ಮಾರ್ಪಡುತ್ತಿದೆಯೇ? ಇಂತಹದೊಂದು ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ನಗರದ ಹಲವು ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ದಿನಗಟ್ಟಲೆ ತ್ಯಾಜ್ಯ ವಿಲೇವಾರಿಯಾಗದೆ ಕೊಳೆತು ನಾರುತ್ತಿದ್ದು, ಮಂಗಳೂರು ಜನತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನದೂಡುವಂತಾಗಿದೆ.
ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ರಸ್ತೆ ಬದಿಗಳು ಸದ್ಯ ತ್ಯಾಜ್ಯದ ತಾಣಗಳಾಗಿವೆ. ಮೂಡಬಿದ್ರೆ-ಮಂಗಳೂರು ಸಂಪರ್ಕಿಸುವ ಬಿಕರ್ನಕಟ್ಟೆ ಕೈಕಂಬ ಮತ್ತು ಬಿಕರ್ನಕಟ್ಟೆ ಜಂಕ್ಷನ್ ಬಳಿ ಲೋಡ್‌ಗಟ್ಟಲೆ ಕಸ ಬಿದ್ದಿದ್ದು, ಇಡೀ ಪರಿಸರ ದುರ್ನಾತ ಬೀರುತ್ತಿದೆ. ಜಯಶ್ರೀಗೇಟ್ ಬಳಿ ದೊಡ್ಡ ದೊಡ್ಡ ಗೋಣಿ ಚೀಲಗಳಲ್ಲಿ ಹಸಿ ಮತ್ತು ಒಣಕಸವನ್ನು ರಾಶಿ ಹಾಕಲಾಗಿದ್ದರೂ ಪಾಲಿಕೆ ಕಣ್ಣೆತ್ತಿ ನೋಡಿಲ್ಲ. ಪ್ರಸಿದ್ಧ ಪ್ರವಾಸಿ ಹಾಗೂ ಯಾತ್ರಾ ಸ್ಥಳಗಳಾದ ಕುದ್ರೋಳಿ ಸುತ್ತಮುತ್ತ ಸೀಯಾಳದ (ಎಳನೀರು) ತ್ಯಾಜ್ಯ ಹಾಗೂ ಮಲ್ಲಿಕಟ್ಟೆ ಮತ್ತು ಗಾಂಧಿನಗರ ಜಂಕ್ಷನ್‌ಗಳಲ್ಲಿ ಮರದ ತ್ಯಾಜ್ಯಗಳು ಪಾದಾಚಾರಿ ರಸ್ತೆಯನ್ನು ಆಕ್ರಮಿಸಿಕೊಂಡಿವೆ.
ಕದ್ರಿ ಪಾರ್ಕ್‌ನಿಂದ ಕದ್ರಿ ದೇವಾಲಯಕ್ಕೆ ಹೋಗುವ ರಸ್ತೆ, ಬಿಜೈ-ಸಂಕೈಗುಡ್ಡ ಮುಖ್ಯ ರಸ್ತೆ ಹಾಗೂ ಕಾವಲು ಕಾಯಬೇಕಾದ ಕದ್ರಿ ಪೊಲೀಸ್ ಠಾಣೆಯ ಮುಂಭಾಗದಲ್ಲೂ ಘನತ್ಯಾಜ್ಯಗಳು ವಿಲೇವಾರಿಯಾಗದೆ ಬಿದ್ದಿರುವುದು ಪಾಲಿಕೆಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಕುಂಟಿಕಾನದ ಕೆಎಸ್‌ಆರ್‌ಟಿಸಿ 2ನೇ ಘಟಕದ ಮುಂಭಾಗದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
-------------------
ಅಧಿಕಾರಿಗಳ ನೆಪ: ಸಾರ್ವಜನಿಕರ ಆಕ್ರೋಶ
ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ-ಕುಂಟಿಕಾನ ಹೆದ್ದಾರಿ ಬದಿಯಲ್ಲಿ ಕಳೆದ 6 ತಿಂಗಳಿನಿಂದ ಕಸದ ರಾಶಿ ಬಿದ್ದಿದ್ದರೂ, ಮಹಾನಗರ ಪಾಲಿಕೆ ಮತ್ತು ಹೆದ್ದಾರಿ ಇಲಾಖೆ ಪರಸ್ಪರ ಜಾರಿಕೊಳ್ಳುತ್ತಿವೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೆದ್ದಾರಿ ಇಲಾಖೆ ಹೇಳಿದರೆ, ಇದು ಹೆದ್ದಾರಿ ವಿಭಾಗದ ಕೆಲಸ ಎಂದು ಪಾಲಿಕೆ ಗೂಬೆ ಕೂರಿಸುತ್ತಿದೆ. ಅಧಿಕಾರಿಗಳ ಈ ಉಡಾಫೆ ಆಟದಿಂದಾಗಿ ಸಾರ್ವಜನಿಕರು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
-------------------
ಮಾರಕ ರೋಗಗಳು ಹರಡುವ ಸಾಧ್ಯತೆ
ಮಳೆಗಾಲದ ಈ ಸಮಯದಲ್ಲಿ ಕಸ ಹೀಗೆಯೇ ಕೊಳೆತರೆ ಡೆಂಗ್ಯೂ, ಮಲೇರಿಯಾದಂತಹ ಮಾರಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಮಂಗಳೂರು ಮಹಾನಗರ ಪಾಲಿಕೆ ತಕ್ಷಣ ಎಚ್ಚೆತ್ತುಕೊಂಡು, ಈ ಕಸದ ಗ್ರಹಣದಿಂದ ನಗರವನ್ನು ಮುಕ್ತಗೊಳಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net